Saturday, 23rd November 2024

Nagarjuna Akkineni: ನಟ ನಾಗಾರ್ಜುನ ವಿರುದ್ಧ ದೂರು ದಾಖಲು

Nagarjuna Akkineni

ಹೈದರಾಬಾದ್‌: ನಟ ನಾಗಾರ್ಜುನ ಅಕ್ಕಿನೇನಿ(Nagarjuna Akkineni) ವಿರುದ್ಧ ಹೈದರಾಬಾದ್‌ನ ಮಾದಾಪುರ ಪೊಲೀಸ್ ಠಾಣೆಯಲ್ಲಿ ಅಕ್ರಮ ಭೂ ಒತ್ತುವರಿ(Illegal land encroachment) ಆರೋಪದ ಮೇಲೆ ದೂರು ದಾಖಲಾಗಿದೆ. ಜನಂ ಕೋಸಂ ಮಾನಸಾಕ್ಷಿ ಫೌಂಡೇಶನ್‌ನ ಎನ್‌ಜಿಒ ಅಧ್ಯಕ್ಷ ಕಾಸಿರೆಡ್ಡಿ ಭಾಸ್ಕರ ರೆಡ್ಡಿ ದೂರು ದಾಖಲಿಸಿದ್ದಾರೆ. ನಾಗಾರ್ಜುನ ಅವರು ನೂರಾರು ಕೋಟಿ ಬೆಲೆ ಬಾಳುವ ಜಾಗದಲ್ಲಿ ಆಗಸ್ಟ್‌ನಲ್ಲಿ ಕೆಡವಲಾದ ಎನ್ ಕನ್ವೆನ್ಷನ್ ಸೆಂಟರ್ ಅನ್ನು ಅಕ್ರಮವಾಗಿ ನಿರ್ಮಿಸಿದ್ದಾರೆ ಎಂದು ರೆಡ್ಡಿ ಆರೋಪಿಸಿದ್ದಾರೆ.

ವಿವಾದಿತ ಭೂಮಿ ತಮ್ಮಿಡಿಕುಂಟಾ ಕೆರೆಯ ಫುಲ್ ಟ್ಯಾಂಕ್ ಲೆವೆಲ್ (ಎಫ್‌ಟಿಎಲ್) ಮತ್ತು ಬಫರ್ ಝೋನ್ ವ್ಯಾಪ್ತಿಗೆ ಬರುತ್ತದೆ ಎಂದು ವರದಿಯಾಗಿದೆ. ದೂರಿನ ಬಗ್ಗೆ ಪೊಲೀಸರು ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. N ಕನ್ವೆನ್ಷನ್ ಸೆಂಟರ್ ಮದುವೆಗಳು ಮತ್ತು ಕಾರ್ಪೊರೇಟ್ ಕೂಟಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಜನಪ್ರಿಯ ಸ್ಥಳವಾಗಿದೆ.

ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿಗಳ ಮಾನಿಟರಿಂಗ್ ಮತ್ತು ಪ್ರೊಟೆಕ್ಷನ್ (ಹೈಡ್ರಾ) ಏಜೆನ್ಸಿಯು ನಟ ಅಕ್ಕಿನೇನಿ ನಾಗಾರ್ಜುನ ಅವರ ಆಸ್ತಿ ಎನ್ ಕನ್ವೆನ್ಶನ್ ಅನ್ನು ಆಗಸ್ಟ್ 24 ರಂದು ನೆಲಸಮಗೊಳಿಸಲಾಗಿತ್ತು.

10 ಎಕರೆ ವಿಸ್ತೀರ್ಣದ ಎನ್ ಕನ್ವೆನ್ಷನ್ ಸೆಂಟರ್ ಹಲವಾರು ಭೂ ಬಳಕೆ ಮತ್ತು ಪರಿಸರ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಕೇಂದ್ರವು ತುಮ್ಮಿಡಿಕುಂಟಾ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದು, ಫುಲ್ ಟ್ಯಾಂಕ್ ಲೆವೆಲ್ (ಎಫ್‌ಟಿಎಲ್) ವ್ಯಾಪ್ತಿಯಲ್ಲಿ 1.12 ಎಕರೆ ಮತ್ತು ಕೆರೆಯ ಬಫರ್ ವಲಯದಲ್ಲಿ ಹೆಚ್ಚುವರಿಯಾಗಿ 2 ಎಕರೆಯನ್ನು ಆಕ್ರಮಿಸಿಕೊಂಡಿದೆ. ಇನ್ನು ಈ ಒತ್ತುವರಿ ತೆರವು ಪ್ರಕ್ರಿಯೆಗಳು ಕಾನೂನು ಬಾಹಿರ. ಜಮೀನು ಖಾಸಗಿಯಾಗಿದ್ದು, ಯಾವುದೇ ಟ್ಯಾಂಕ್ ಪ್ಲಾನ್ ಒತ್ತುವರಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಮತ್ತೊಂದೆಡೆ ಭಾರತ್ ರಕ್ಷಾ ಸಮಿತಿ (BRS) ಮುಖಂಡ ಕೆ.ಟಿ.ರಾಮರಾವ್ ಹಸ್ತಕ್ಷೇಪದಿಂದ ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಅವರ ಸಂಬಂಧದಲ್ಲಿ ಬಿರುಕು ಉಂಟಾಗಿ ವಿಚ್ಛೇದನಕ್ಕೆ ಕಾರಣವಾಯಿತು ಎಂಬ ತೆಲಂಗಾಣ ಸಚಿವೆ ಕೊಂಡಾ ಸುರೇಖಾ ಹೇಳಿಕೆ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ ನಟ ನಾಗಾರ್ಜುನ ಅಕ್ಕಿನೇನಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಇದೀಗ ನಾಗಾರ್ಜುನ ಅವರು ಕೊಂಡ ಸುರೇಖಾ ಅವರ ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಮತ್ತು ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Nagarjuna: ಕೊಂಡಾ ಸುರೇಖಾ ವಿರುದ್ಧ ಕ್ರಿಮಿನಲ್ ಮತ್ತು ಮಾನನಷ್ಟ ಮೊಕದ್ದಮೆ ದಾಖಲಿಸಿದ ನಾಗಾರ್ಜುನ ಅಕ್ಕಿನೇನಿ