ಹೈದರಾಬಾದ್: ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ, ಅನಾರೋಗ್ಯದಿಂದಾಗಿ ಜೈಲಿನಿಂದ ಹೊರಬಂದು ಚಿಕಿತ್ಸೆ ಪಡೆಯುತ್ತಿರುವ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಹೈಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ.
ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಮಲ್ಲಿಕಾರ್ಜುನ್ ರಾವ್ ಅವರು, ಬಾಬು ಅವರ ಮನವಿಯನ್ನು ಪುರಸ್ಕರಿಸಿದರು. ಅನಾರೋಗ್ಯ ನಿಮಿತ್ತ ಬಾಬು ಅವರಿಗೆ ನೀಡಲಾಗಿದ್ದ ಮಧ್ಯಂತರ ಜಾಮೀನು ಅವಧಿ ಇದೇ 28ಕ್ಕೆ ಮುಗಿಯಲಿದ್ದು, ಅವರು ಮತ್ತೆ ಜೈಲಿಗೆ ಹೋಗುವುದು ತಪ್ಪಿದೆ.
ಪ್ರಕರಣದ ವಿಚಾರಣೆ ಕುರಿತಂತೆ ಅವರು ಇದೇ 30 ರಂದು ಎಸಿಬಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಇದೇ ವೇಳೆ ಕೋರ್ಟ್ ಹೇಳಿದೆ. ಸ್ಕಿಲ್ ಡೆವಲಪ್ಮೆಂಟ್ ಕೇಸ್ನಲ್ಲಿ ಆರೋಪಿಯಾಗಿರುವ ಚಂದ್ರಬಾಬು ಅವರನ್ನು ಸೆಪ್ಟೆಂಬರ್ 9ರಂದು ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ರಾಜಮಂಡ್ರಿ ಸೆಂಟ್ರಲ್ ಜೈಲಿನಲ್ಲಿ ಇಡಲಾಗಿತ್ತು.
ಚಂದ್ರಬಾಬು ಅವರು ಕೋರಿದ್ದ ಜಾಮೀನು ಅರ್ಜಿ ಕುರಿತು ಈ ತಿಂಗಳ 15 ಮತ್ತು 16 ರಂದು ವಿಚಾರಣೆ ನಡೆಯಿತು. ಸಿಐಡಿ ಪರವಾಗಿ ಎಎಜಿ ಪೊನ್ನ ವೋಲು ಸುಧಾಕರ್ ರೆಡ್ಡಿ ವಾದ ಮಂಡಿಸಿದರೆ, ಚಂದ್ರಬಾಬು ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ ಲೂತ್ರಾ ವಾದಿಸಿದರು.