Saturday, 14th December 2024

ಅಸ್ಸಾಂನ ನಲ್ಬರಿ ಜಿಲ್ಲೆಯಲ್ಲಿ ಪ್ರವಾಹ: 108 ಹಳ್ಳಿಗಳು ಜಲಾವೃತ

ಲ್ಬರಿ (ಅಸ್ಸಾಂ): ಅಸ್ಸಾಂನ ನಲ್ಬರಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಹದಗೆಟ್ಟಿದ್ದು, 108 ಹಳ್ಳಿಗಳು ಪ್ರಸ್ತುತ ಜಲಾವೃತವಾಗಿವೆ. 45,000ಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮೊಯಿರಾರಂಗ, ಬಟಗಿಲ ಗ್ರಾಮದ ಸುಮಾರು 200 ಕುಟುಂಬಗಳು ಈ ಪ್ರವಾಹದಿಂದ ಸಂತ್ರಸ್ತರಾಗಿದ್ದು, ಬಹುತೇಕ ಕುಟುಂಬಗಳು ಇದೀಗ ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸಿ ಕೊಂಡು ರಸ್ತೆ, ಒಡ್ಡುಗಳಲ್ಲಿ ಆಶ್ರಯ ಪಡೆದಿವೆ.

ಅಸ್ಸಾಂ ಮತ್ತು ನೆರೆಯ ದೇಶ ಭೂತಾನ್‌ನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ನಂತರ ಪಗ್ಲಾಡಿಯಾ ನದಿಯ ನೀರಿನ ಮಟ್ಟವು ಅಪಾಯದ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿದೆ ಮತ್ತು ಕಳೆದ 24 ಗಂಟೆಗಳಲ್ಲಿ ಅನೇಕ ಪ್ರದೇಶಗಳು ಜಲಾವೃತವಾಗಿವೆ.

ಜಿಲ್ಲೆಯ ಘೋಗ್ರಾಪರ್, ತಿಹು, ಬರ್ಭಾಗ್ ಮತ್ತು ಧಮ್‌ಧಾಮ ಪ್ರದೇಶದ ಸುಮಾರು 90 ಗ್ರಾಮಗಳು ಪ್ರವಾಹದ ನೀರಿನಿಂದ ಮುಳುಗಿವೆ ಮತ್ತು ಅನೇಕ ಗ್ರಾಮಸ್ಥರು ತಮ್ಮ ಮನೆಗಳನ್ನು ತೊರೆದು ರಸ್ತೆಗಳು, ಎತ್ತರದ ಭೂಮಿಗಳಲ್ಲಿ ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸಿ ಆಶ್ರಯ ಪಡೆದಿದ್ದಾರೆ.