ಕೋಲ್ಕತ್ತ: ಕೋಲ್ಕತ್ತ ಹೈಕೋರ್ಟ್ ನಾರದ ಪ್ರಕರಣದ ವಿಚಾರಣೆಯನ್ನು ಮೇ 28ಕ್ಕೆ ಮುಂದೂಡಿದೆ. ಐವರು ಸದಸ್ಯರ ನ್ಯಾಯಪೀಠವು ವಿಚಾರಣೆ ನಡೆಸುತ್ತಿದೆ.
ಸಿಬಿಐನಿಂದ ಬಂಧಿತರಾಗಿರುವ ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಫಿರ್ಹಾದ್ ಹಕೀಮ್, ಪಂಚಾಯತ್ ಸಚಿವ ಸುಬ್ರತಾ ಮುಖರ್ಜಿ, ಶಾಸಕ ಮದನ್ ಮಿತ್ರಾ ಮತ್ತು ಟಿಎಂಸಿಯ ಮಾಜಿ ಮುಖಂಡ ಸೋವನ್ ಚಟರ್ಜಿ ಅವರನ್ನು ಸದ್ಯ ಗೃಹಬಂಧನದಲ್ಲಿ ಇರಿಸಲಾಗಿದೆ.
ನಾರದ ಮಾರುವೇಷ ಕಾರ್ಯಾಚರಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೃಣಮೂಲ ಕಾಂಗ್ರೆಸ್‌ನ ಮೂವರು ಹಿರಿಯ ನಾಯಕರು ಮತ್ತು ಸಚಿವರು ಮೇ 17ರಂದು ಸಿಬಿಐನಿಂದ ಬಂಧಿಸಲ್ಪಟ್ಟಿದ್ದರು. ನಂತರ ಜೈಲಿನಲ್ಲಿದ್ದ ನಾಲ್ವರು ಮುಖಂಡರನ್ನು ಗೃಹಬಂಧನದಲ್ಲಿ ಇರಿಸಬೇಕೆಂದು ಮೇ 21ರಂದು, ಹೈಕೋರ್ಟ್‌ನ ಗೃಹಬಂಧನದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದೆ. ಈ ವಿಚಾರಕ್ಕೆ ಸಂಬಂಧಿಸಿ ಸಲ್ಲಿಸಿದ್ದ ಅರ್ಜಿಯನ್ನು ಹಿಂತೆಗೆದುಕೊಳ್ಳಲು ಸಿಬಿಐಗೆ ಸುಪ್ರೀಂ ಕೋರ್ಟ್ ಮೇ 25ರಂದು ಅವಕಾಶ ನೀಡಿದೆ.