Friday, 1st November 2024

Narendra Modi: ಚುನಾವಣಾ ಗ್ಯಾರಂಟಿ ಬಗ್ಗೆ ಖರ್ಗೆ ನೀಡಿದ ಎಚ್ಚರಿಕೆಯಿಂದ ಕಾಂಗ್ರೆಸ್ ಬಣ್ಣ ಬಯಲಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ

ಹೊಸದಿಲ್ಲಿ: ಕಾಂಗ್ರೆಸ್‌ನ ರಾಜ್ಯ ಘಟಕಗಳು ಆರ್ಥಿಕವಾಗಿ ಸಾಧ್ಯವಾಗಬಹುದಾದ ಭರವಸೆಗಳನ್ನು ಮಾತ್ರ ನೀಡಬೇಕು ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನೀಡಿದ ಸಲಹೆಯನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ (ನ. 1) ಕೈ ಪಡೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಅವಾಸ್ತವಿಕ ಭರವಸೆಗಳನ್ನು ನೀಡುವುದು ಸುಲಭ. ಆದರೆ ಅವುಗಳನ್ನು ಸರಿಯಾಗಿ ಕಾರ್ಯಗತಗೊಳಿಸುವುದು ಕಠಿಣ ಅಥವಾ ಅಸಾಧ್ಯ ಎಂಬುದನ್ನು ಕಾಂಗ್ರೆಸ್ ಅರಿತುಕೊಳ್ಳುತ್ತಿದೆ. ಚುನಾವಣಾ ಪ್ರಚಾರದ ವೇಳೆ ಅವರು ಜನರಿಗೆ ನಾನಾ ಭರವಸೆ ನೀಡುತ್ತಾರೆ. ಅಚ್ಚರಿ ಎಂದರೆ ಅದನ್ನು ಎಂದಿಗೂ ನೆರವೇರಿಸಲು ಸಾಧ್ಯವಿಲ್ಲ ಎನ್ನುವುದು ಅವರಿಗೂ ಗೊತ್ತಿರುತ್ತದೆ. ಇದೀಗ ಅವರ ಬಂಡವಾಳ, ನಿಜವಾದ ಬಣ್ಣ ಜನರ ಮುಂದೆ ಬಯಲಾಗಿದೆ” ಎಂದು ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ- ಇಂದು ಕಾಂಗ್ರೆಸ್ ಸರ್ಕಾರವಿರುವ ಯಾವುದೇ ರಾಜ್ಯವನ್ನು ಪರಿಶೀಲಿಸಿದರೆ ಸಾಕು ಇಲ್ಲಿ ಅಭಿವೃದ್ಧಿಯ ಪಥ ಮತ್ತು ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಡುತ್ತಿದೆ ಎನ್ನುವ ವಿಚಾರ ತಿಳಿಯುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

“ಕಾಂಗ್ರೆಸ್‌ ಭರವಸೆಗಳು ಈಡೇರದೆ ಹಾಗೇ ಉಳಿದಿವೆ. ಇದು ಈ ರಾಜ್ಯಗಳ ಜನರಿಗೆ ಎಸಗಿದ ಮೋಸ. ಬಡವರು, ಯುವಕರು, ರೈತರು ಮತ್ತು ಮಹಿಳೆಯರು ರಾಜಕೀಯದ ಬಲಿಪಶುಗಳು. ಅವರಿಗೆ ನೀಡಿದ ಈ ಭರವಸೆಗಳನ್ನು ಕಾಂಗ್ರೆಸ್‌ ಈಡೇರಿಸುವುದಿಲ್ಲ ಮಾತ್ರವಲ್ಲ ಅಸ್ತಿತ್ವದಲ್ಲಿರುವ ಯೋಜನೆಗಳನ್ನೂ ಅವರಿಗೆ ನಿರಾಕರಿಸಲಾಗುತ್ತದೆ” ಎಂದು ಮೋದಿ ಕಿಡಿ ಕಾರಿದ್ದಾರೆ.

“ಕಾಂಗ್ರೆಸ್ ಪ್ರಾಯೋಜಿತ ಸುಳ್ಳು ಭರವಸೆಗಳ ಸಂಸ್ಕೃತಿಯ ವಿರುದ್ಧ ದೇಶದ ಜನರು ಜಾಗರೂಕರಾಗಿರಬೇಕು. ಹರಿಯಾಣದ ಜನರು ಅವರ ಸುಳ್ಳುಗಳನ್ನು ಹೇಗೆ ತಿರಸ್ಕರಿಸಿದರು ಮತ್ತು ಸ್ಥಿರ, ಪ್ರಗತಿ ಆಧಾರಿತ ಮತ್ತು ಕ್ರಿಯಾಶೀಲ ಸರ್ಕಾರವನ್ನು ಹೇಗೆ ಆಯ್ಕೆ ಮಾಡಿದ್ದಾರೆ ಎಂಬುದನ್ನು ನಾವು ಇತ್ತೀಚೆಗೆ ನೋಡಿದ್ದೇವೆ” ಎಂದು ಪ್ರಧಾನಿ ಹೇಳಿದ್ದಾರೆ.

ʼʼಕಾಂಗ್ರೆಸ್‌ಗೆ ಮತ ಹಾಕಿದರೆ ಅದು ಕಳಪೆ ಆರ್ಥಿಕತೆ ಮತ್ತು ಸಾಟಿಯಿಲ್ಲದ ಲೂಟಿಗೆ ದಾರಿಯಾಗುತ್ತದೆ ಎಂಬ ಅರಿವು ಭಾರತದಾದ್ಯಂತ ಬೆಳೆಯುತ್ತಿದೆ. ಭಾರತದ ಜನರು ಅಭಿವೃದ್ಧಿ ಮತ್ತು ಪ್ರಗತಿಯನ್ನು ಬಯಸುತ್ತಾರೆ. ಅದೇ ಹಳೆಯ #FakePromisesOfCongress ಅಲ್ಲ” ಎಂದು ಬರೆದುಕೊಂಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?

ಪತ್ರಿಕಾಗೋಷ್ಠಿಯಲ್ಲಿ ಇತ್ತೀಚೆಗೆ ಮಾತನಾಡಿದ್ದ ಕಾಂಗ್ರೆಸ್‌ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು, “ಮಹಾರಾಷ್ಟ್ರದಲ್ಲಿ 5, 6, 10 ಅಥವಾ 20 ಭರವಸೆಗಳನ್ನು ಘೋಷಿಸಬಾರದು ಎಂದು ನಾನು ನಾಯಕರಿಗೆ ಹೇಳಿದ್ದೇನೆ. ಬಜೆಟ್ ಆಧಾರದ ಮೇಲೆ ಗ್ಯಾರಂಟಿ ಘೋಷಿಸಬೇಕು ಎಂದು ಸೂಚಿಸಿದ್ದೇನೆ. ಇಲ್ಲದಿದ್ದರೆ ದಿವಾಳಿಯಾಗಬೇಕಾಗುತ್ತದೆ. ರಸ್ತೆಗಳ ಅಭಿವೃದ್ಧಿಗೆ ಹಣವಿಲ್ಲದಿದ್ದರೆ ಎಲ್ಲರೂ ನಿಮ್ಮ ವಿರುದ್ಧ ತಿರುಗಿ ಬೀಳುತ್ತಾರೆ. ಈ ಸರ್ಕಾರ ವಿಫಲವಾದರೆ ಭವಿಷ್ಯದ ಪೀಳಿಗೆಗೆ ಕೆಟ್ಟ ಹೆಸರು ಬರುವುದಲ್ಲದೆ ಬೇರೇನೂ ಉಳಿಯುವುದಿಲ್ಲ. ಇದರಿಂದ 10 ವರ್ಷಗಳ ಕಾಲ ಕಳಂಕಿತರಾಗಿಯೇ ಇರಬೇಕಾಗುತ್ತದೆ” ಎಂದು ಅವರು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Mallikarjun Kharge: ಒಂದು ರಾಷ್ಟ್ರ, ಒಂದು ಚುನಾವಣೆ ಅಸಾಧ್ಯ; ಪ್ರಧಾನಿ ಮೋದಿಗೆ ಖರ್ಗೆ ತಿರುಗೇಟು