ಹೊಸದಿಲ್ಲಿ: ಬ್ರೆಜಿಲ್ನಲ್ಲಿ ನಡೆಯಲಿರುವ ಜಿ20 ಶೃಂಗಸಭೆ (G20 Summit)ಯಲ್ಲಿ ಭಾಗವಹಿಸಲು ಮತ್ತು ನೈಜೀರಿಯಾ ಮತ್ತು ಗಯಾನದೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನ. 16ರಿಂದ 3 ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿದ್ದಾರೆ.
ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು (Bola Ahmed Tinubu) ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ನ. 16-17ರಂದು ನೈಜೀರಿಯಾಕ್ಕೆ ಭೇಟಿ ನೀಡಲಿದ್ದಾರೆ. ಕಳೆದ 17 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ನೈಜೀರಿಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು ಎಂದು ವಿದೇಶಾಂಗ ಸಚಿವಾಲಯ ಮಂಗಳವಾರ (ನ. 12) ತಿಳಿಸಿದೆ.
ಈ ವೇಳೆ ಭಾರತ ಮತ್ತು ನೈಜೀರಿಯಾ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಪರಿಶೀಲಿಸುವುದರ ಜತೆಗೆ, ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಮೋದಿ ಚರ್ಚೆ ನಡೆಸಲಿದ್ದಾರೆ. ಜತೆಗೆ ಅವರು ಭಾರತೀಯ ಸಮುದಾಯದ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಭಾರತ ಮತ್ತು ನೈಜೀರಿಯಾ 2007ರಿಂದ ಆರ್ಥಿಕ, ಇಂಧನ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಸಹಕರಿಸುತ್ತಿವೆ. ಸುಮಾರು 200 ಭಾರತೀಯ ಕಂಪೆನಿಗಳು ನೈಜೀರಿಯಾದಲ್ಲಿ 27 ಬಿಲಿಯನ್ ಡಾಲರ್ಗಿಂತ ಹೆಚ್ಚು ಹೂಡಿಕೆ ಮಾಡಿವೆ.
#WATCH | G 20 in India | Prime Minister Narendra Modi hands over the gavel of G 20 presidency to the President of Brazil Luiz Inácio Lula da Silva. pic.twitter.com/ihEmXN9lty
— ANI (@ANI) September 10, 2023
ಮುಖ್ಯ ಅಜೆಂಡ
ಬಳಿಕ ನ. 18-19ರಂದು ಬ್ರೆಜಿಲ್ನ ರಿಯೋ ಡಿ ಜನೈರೊದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ. ಜಿ20 ಶೃಂಗಸಭೆಯ ಚರ್ಚೆಗಳಲ್ಲಿ ಭಾರತ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಶೃಂಗಸಭೆಯಲ್ಲಿ ಮೋದಿ ಜಾಗತಿಕ ಪ್ರಾಮುಖ್ಯತೆಯ ವಿವಿಧ ವಿಷಯಗಳ ಬಗ್ಗೆ ಭಾರತದ ನಿಲುವನ್ನು ಮಂಡಿಸಲಿದ್ದಾರೆ ಮತ್ತು ಕಳೆದ ಬಾರಿ ಭಾರತ ಆಯೋಜಿಸಿದ್ದ ಜಿ20 ಶೃಂಗಸಭೆಯಲ್ಲಿನ ನಾಯಕರ ಘೋಷಣೆ ಮತ್ತು ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್ ಶೃಂಗಸಭೆಯ ನಿರ್ಣಯಗಳನ್ನು ತಿಳಿಸಲಿದ್ದಾರೆ. ಜಿ20 ಶೃಂಗಸಭೆಯಲ್ಲಿ ಮೋದಿ ಹಲವು ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇನ್ನು ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ (Mohamed Irfaan Ali) ಅವರ ಆಹ್ವಾನದ ಮೇರೆಗೆ ನ. 19-21ರಂದು ಮೋದಿ ಗಯಾನ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಮೂಲಕ 3 ರಾಷ್ಟ್ರಗಳ ಪ್ರವಾಸಕ್ಕೆ ತೆರೆ ಬೀಳಲಿದೆ. 1968ರ ಬಳಿಕ ಭಾರತದ ಪ್ರಧಾನಿಯೊಬ್ಬರು ಗಯಾನಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಭೇಟಿ ವೇಳೆ ಮೋದಿ ಅವರು ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಮತ್ತು ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಅಲ್ಲಿನ ಸಂಸತ್ತಿನಲ್ಲಿ ಮಾತನಾಡಲಿದ್ದಾರೆ. ಜತೆಗೆ ಭಾರತೀಯರೊಂದಿಗೆ ಚರ್ಚೆಯನ್ನೂ ನಡೆಸಲಿದ್ದಾರೆ. ಗಯಾನಾದ ಜಾರ್ಜ್ಟೌನ್ನಲ್ಲಿ ನಡೆಯಲಿರುವ 2ನೇ CARICOM-India ಶೃಂಗಸಭೆಯಲ್ಲಿಯೂ ಮೋದಿ ಭಾಗವಹಿಸಲಿದ್ದಾರೆ ಮತ್ತು ಸದಸ್ಯ ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.
2023ರಲ್ಲಿ ಮೊಹಮ್ಮದ್ ಇರ್ಫಾನ್ ಅಲಿ ಅವರಿಗೆ ಮಧ್ಯಪ್ರದೇಶದಲ್ಲಿ ನಡೆದ ಪ್ರವಾಸಿ ಭಾರತೀಯ ದಿವಸ್ನಲ್ಲಿ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
ಈ ಸುದ್ದಿಉನ್ನೂ ಓದಿ: BRICS Summit: ಭಾರತದ ಆರ್ಥಿಕ ಬೆಳವಣಿಗೆಯನ್ನು ಶ್ಲಾಘಿಸಿದ ಪುಟಿನ್; ಬ್ರಿಕ್ಸ್ ದೇಶಗಳಿಗೆ ಮಾದರಿ ಎಂದ ರಷ್ಯಾ ಅಧ್ಯಕ್ಷ