ಚಂಡಿಗಢ: ಮುಡಾ ಹಗರಣ (MUDA scam) ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ತನಿಖೆಗೆ ಆದೇಶಿಸಿ ತೀರ್ಪು ನೀಡಿದ ವಿಚಾರ ದೂರದ ಹರಿಯಾಣದಲ್ಲಿಯೂ ಸದ್ದು ಮಾಡಿದೆ. ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ನರೆಂದ್ರ ಮೋದಿ (Narendra Modi) ಈ ವಿಚಾರವನ್ನು ಪ್ರಸ್ತಾವಿಸಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ಸೋನಿಪತ್‌ನಲ್ಲಿ ಇಂದು ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಕೇಳಿ ಬಂದ ಮುಡಾ ಹಗರಣವನ್ನು ಪ್ರಸ್ತಾವಿಸಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಂತಹ ಪಕ್ಷಕ್ಕೆ (ಕಾಂಗ್ರೆಸ್) ಅಧಿಕಾರ ನೀಡಲು ಹರಿಯಾಣ ತಯಾರಿದೆಯೇ ಎಂದು ಮತದಾರರನ್ನು ಪ್ರಶ್ನಿಸಿದರು.
सोनीपत में उत्साह और उमंग से साफ है कि जनता-जनार्दन के आशीर्वाद से भाजपा लगातार तीसरी बार हरियाणा में बहुमत की सरकार बनाने जा रही है।https://t.co/hFYi82yR0H
— Narendra Modi (@narendramodi) September 25, 2024
“ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲೆಲ್ಲ ಸಾಕಷ್ಟು ಭ್ರಷ್ಟಾಚಾರ ನಡೆಸಿದೆ. ಭಾರತದ ಸರ್ಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಕ್ಕೆ ಜನ್ಮ ನೀಡಿದ ಮತ್ತು ಪೋಷಿಸಿದ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಭಾರತದಲ್ಲಿ ಭ್ರಷ್ಟಾಚಾರದ ತಾಯಿ. ಹೈಕಮಾಂಡ್ ಭ್ರಷ್ಟವಾದಾಗ ಪ್ರತಿಯೊಬ್ಬರೂ ಭ್ರಷ್ಟಾಚಾರ ಮತ್ತು ಲೂಟಿ ಮಾಡಲು ಪರವಾನಗಿ ಪಡೆಯುತ್ತಾರೆ” ಎಂದು ಪ್ರಧಾನಿ ಮೋದಿ ಕಿಡಿ ಕಾರಿದರು.
ʼʼ10 ವರ್ಷಗಳ ಹಿಂದೆ ಹರಿಯಾಣವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿತ್ತು. ರೈತರ ಜಮೀನುಗಳನ್ನು ಲೂಟಿ ಮಾಡಲಾಯಿತು. ಈಗ ಕರ್ನಾಟಕದಲ್ಲಿ ಕಾಂಗ್ರೆಸ್‌ನ ಸ್ಥಿತಿಯನ್ನು ನೋಡಿ. ಕೈ ಪಕ್ಷ ಅಧಿಕಾರಕ್ಕೆ ಬಂದು ಎರಡೇ ವರ್ಷಗಳಲ್ಲಿ ಅಲ್ಲಿನ ಸ್ಥಿತಿ ಏನಾಗಿದೆ ಎನ್ನುವುದನ್ನು ಗಮನಿಸಿ. ಕರ್ನಾಟಕದ ಮುಖ್ಯಮಂತ್ರಿ ಭೂ ಹಗರಣದಲ್ಲಿ ಆರೋಪಿಯಾಗಿದ್ದಾರೆ. ಕೋರ್ಟ್ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಹೇಳಿದೆ. ದಲಿತರಿಗೆ ಮೀಸಲಾದ ನಿಧಿಯಲ್ಲಿಯೂ ಕಾಂಗ್ರೆಸ್ ಹಗರಣ ಮಾಡಿದೆ. ಇಡೀ ದೇಶದಲ್ಲಿ ಕಾಂಗ್ರೆಸ್‌ಗಿಂತ ಅಪ್ರಾಮಾಣಿಕ ಪಕ್ಷ ಬೇರೊಂದಿಲ್ಲ” ಎಂದು ಮೋದಿ ಹೇಳಿದರು.
“ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ದುರ್ಬಲಗೊಳ್ಳುತ್ತಿದೆ. ಹರಿಯಾಣದಲ್ಲಿ ಬಿಜೆಪಿಗೆ ಬೆಂಬಲ ಹೆಚ್ಚುತ್ತಿದೆ. ಇಡೀ ಹರಿಯಾಣ ‘ಮತ್ತೊಮ್ಮೆ ಬಿಜೆಪಿ ಸರ್ಕಾರ್’ ಎಂದು ಹೇಳುತ್ತಿದೆʼʼ ಎಂದು ಮೋದಿ ಅಭಿಪ್ರಾಯಪಟ್ಟರು.
ಕ್ರೀಡಾಪಟುಗಳಿಗೆ ಮೆಚ್ಚುಗೆ
ಇದೇ ವೇಳೆ ಮೋದಿ ಅವರು ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹರಿಯಾಣದ ಕ್ರೀಡಾಪಟುಗಳನ್ನು ಅಭಿನಂದಿಸಿದರು. “ಹರಿಯಾಣವು ಭಾರತದ ಪದಕಗಳ ಕಾರ್ಖಾನೆಯಾಗಿ ಬದಲಾಗಿದೆ. ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಐತಿಹಾಸಿಕ ಪ್ರದರ್ಶನದಲ್ಲಿ ಹರಿಯಾಣದ ಕ್ರೀಡಾಪಟುಗಳ ಪಾತ್ರ ಗಣನೀಯವಾಗಿದೆʼʼ ಎಂದು ಅವರು ಮೆಚ್ಚುಗೆ ಸೂಚಿಸಿದರು.
“2036ರ ಒಲಿಂಪಿಕ್ಸ್‌ನ ಆತಿಥ್ಯ ವಹಿಸಲು ಭಾರತವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಇದು ಹರಿಯಾಣದ ಯುವಕರಿಗೆ ಸಾಕಷ್ಟು ಅವಕಾಶ ನೀಡಲಿದೆ. ಪ್ರತಿ ಹಳ್ಳಿಯ ಆಟಗಾರರಿಗೆ ಅನೇಕ ಅವಕಾಶಗಳು ಸಿಗುತ್ತವೆ. ಬಿಜೆಪಿ ಸೋನಿಪತ್‌ನಲ್ಲಿ ಭಾರತದ ಮೂರನೇ ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ಹರಿಯಾಣದ ಪ್ರತಿ ಜಿಲ್ಲೆಯಲ್ಲೂ ಒಲಿಂಪಿಕ್ ಕ್ರೀಡಾಕೂಟದ ನರ್ಸರಿಗಳನ್ನು ಸ್ಥಾಪಿಸುವುದಾಗಿ ಬಿಜೆಪಿ ಘೋಷಿಸಿದೆʼʼ ಎಂದು ಮೋದಿ ತಿಳಿಸಿದರು.
ಈ ಸುದ್ದಿಯನ್ನೂ ಓದಿ: Muda Case: ಮುಡಾ ಹಗರಣ; ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಕೋರ್ಟ್ ಆದೇಶ