ಹೊಸದಿಲ್ಲಿ: ಸುಮಾರು ಎರಡು ದಶಕಗಳ ಹಿಂದೆ ಗುಜರಾತ್‌ನಲ್ಲಿ ನಡೆದ ಸಬರಮತಿ ಎಕ್ಸ್‌ಪ್ರೆಸ್ ದುರಂತದ ಬಗೆಗಿನ ಕಥಾ ಹಂದರವನ್ನಿಟ್ಟುಕೊಂಡು ಇತ್ತೀಚೆಗೆ ತೆರೆಕಂಡ ಬಾಲಿವುಡ್‌ನ ʻದಿ ಸಬರಮತಿ ರಿಪೋರ್ಟ್ʼ (The Sabaramati Report) ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ (ಡಿ. 2) ವೀಕ್ಷಿಸಿದ್ದಾರೆ. ಸಂಸದರೊಂದಿಗೆ ಚಿತ್ರ ವೀಕ್ಷಿಸಿದ ಮೋದಿ ಅವರು ಫೋಟೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡು ಸಿನಿಮಾತಂಡದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಸಂಸತ್ ಭವನದ ಬಾಲಯೋಗಿ ಸಭಾಂಗಣದಲ್ಲಿ ಅವರು ಮೋದಿ ಮತ್ತು ಬಿಜೆಪಿ ನಾಯಕರು ಸಿನಿಮಾ ವೀಕ್ಷಿಸಿದ್ದಾರೆ. ಬಳಿಕ ಈ ಬಗ್ಗೆ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದು, ʼʼಎನ್‌ಡಿಎ ಮುಖಂಡರೊಂದಿಗೆ ʻದಿ ಸಬರಮತಿ ರಿಪೋರ್ಟ್ʼ ಚಿತ್ರವನ್ನು ವೀಕ್ಷಿಸಿದೆ. ಚಿತ್ರತಂಡದ ಪ್ರಯತ್ನ ಶ್ಲಾಘನೀಯʼʼ ಎಂದು ಮೋದಿ ಹೇಳಿದ್ದಾರೆ. ಮೋದಿ ಅವರೊಂದಿಗೆ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರಾದ ರಾಜನಾಥ ಸಿಂಗ್, ಕಿರಣ್ ರಿಜಿಜು, ಜಿತನ್ ರಾಮ್ ಮಂಜಿ, ಅಶ್ವಿನಿ ವೈಷ್ಣವ್ ಹಾಜರಿದ್ದರು. ಇವರ ಜತೆಗೆ ಚಿತ್ರದ ನಾಯಕ ವಿಕ್ರಾಂತ್ ಮಾಸ್ಸಿ, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ರಿಧಿ ಡೋಗ್ರಾ, ನಿರ್ದೇಶಕ ಧೀರಜ್ ಸರ್ನಾ, ನಿರ್ಮಾಪಕಿ ಏಕ್ತಾ ಕಪೂರ್ ಅವರ ತಂದೆ, ಹಿರಿಯ ನಟ ಜಿತೇಂದ್ರ ಉಪಸ್ಥಿತರಿದ್ದರು.
Joined fellow NDA MPs at a screening of 'The Sabarmati Report.'
— Narendra Modi (@narendramodi) December 2, 2024
I commend the makers of the film for their effort. pic.twitter.com/uKGLpGFDMA
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ವಿಕ್ರಾಂತ್ ಮಾಸ್ಸಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ʼʼಪ್ರಧಾನಿ ನರೇಂದ್ರ ಮೋದಿ, ಸಚಿವರು ಮತ್ತು ಸಂಸದರ ಜತೆಗೆ ಚಿತ್ರವನ್ನು ವೀಕ್ಷಿಸಿದೆ. ಇದೊಂದು ವಿಶೇಷ ಅನುಭವ. ಈ ಖುಷಿಯನ್ನು ಮಾತಿನಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ನನ್ನ ವೃತ್ತೀ ಜೀವನದಲ್ಲೇ ಇದು ಅತ್ಯಂತ ಮಹತ್ವದ ಘಳಿಗೆ. ಪ್ರಧಾನಿ ಅವರೊಂದಿಗೆ ಚಿತ್ರ ವೀಕ್ಷಿಸಿದ ಕ್ಷಣ ಮರೆಯಲು ಸಾಧ್ಯವಿಲ್ಲʼʼ ಎಂದು ಹೇಳಿದ್ದಾರೆ. ವಿಕ್ರಾಂತ್ ಮಾಸ್ಸಿ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
2002ರ ಫೆಬ್ರವರಿ 27ರಂದು ನಡೆದ ಗೋದ್ರಾ ರೈಲು ದುರಂತದ ಘಟನೆಯನ್ನು ಆಧರಿಸಿದ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾದಲ್ಲಿ ವಿಕ್ರಾಂತ್ ಮಾಸಿ, ರಾಶಿ ಖನ್ನಾ, ರಿಧಿ ಡೋಗ್ರ, ಬರ್ಕಾ ಸಿಂಗ್ ಮುಂತಾದವರು ನಟಿಸಿದ್ದಾರೆ.
ಅಂದು ಏನಾಗಿತ್ತು?
ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ, ಕರ ಸೇವಕರಿದ್ದ ಸಾಬರಮತಿ ಎಕ್ಸ್‌ಪ್ರೆಸ್ ರೈಲಿಗೆ ಗುಜರಾತ್‌ನ ಗೋಧ್ರಾದಲ್ಲಿ 2002ರ ಫೆಬ್ರವರಿ 27ರಂದು ಬೆಂಕಿ ಹಚ್ಚಲಾಗಿತ್ತು. ಘಟನೆಯಲ್ಲಿ 59ಕ್ಕೂ ಹೆಚ್ಚು ಕರಸೇವಕರು ಮೃತಪಟ್ಟಿದ್ದರು. ಗೋಧ್ರಾದ ಈ ಘಟನೆಯು ಆಗ ಗುಜರಾತ್ ರಾಜ್ಯದಲ್ಲಿ ಕೋಮು ಗಲಭೆಗೆ ಕಾರಣವಾಯಿತಲ್ಲದೇ 1,200ಕ್ಕೂ ಹೆಚ್ಚು ಜನ ಕೊಲ್ಲಲ್ಪಟ್ಟಿದ್ದರು. ʼದಿ ಸಾಬರಮತಿ ರಿಪೋರ್ಟ್ʼ ಚಲನಚಿತ್ರದ ಮೂಲಕ ಈ ನೈಜ ಕತೆಯನ್ನು ತಿಳಿಸಲು ಚಿತ್ರತಂಡ ಹೊರಟಿದೆ. 22 ವರ್ಷಗಳ ಹಿಂದೆ ನಡೆದ ಹತ್ಯಾಕಾಂಡದ ಸತ್ಯಾಸತ್ಯತೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ನ. 15ರಂದು ಈ ಸಿನಿಮಾ ತೆರೆಕಂಡಿದ್ದು, ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸ್‌ನಲ್ಲೂ ಮ್ಯಾಜಿಕ್ ಮಾಡಿದೆ.
ಈ ಸುದ್ದಿಯನ್ನೂ ಓದಿ: Vikrant Massey: ಸಿನಿ ಜಗತ್ತಿಗೆ ಗುಡ್ ಬೈ ಹೇಳಿದ ಬಾಲಿವುಡ್ ನಟ ವಿಕ್ರಾಂತ್ ಮಾಸ್ಸೆ..!