Monday, 16th December 2024

Narendra Modi: ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಜತೆ ಪ್ರಧಾನಿ ಮೋದಿ ಮಾತುಕತೆ; ಕಡಲ ಭದ್ರತೆ ಪ್ರಮುಖ ಅಜೆಂಡಾ

Narendra Modi

ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಮತ್ತು ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ (Anura Kumara Dissanayake) ಅವರ ಸಮ್ಮುಖದಲ್ಲಿ ಹೊಸದಿಲ್ಲಿಯಲ್ಲಿ ಭಾರತ ಮತ್ತು ಶ್ರೀಲಂಕಾ ಸೋಮವಾರ (ಡಿ. 16) ಪ್ರಮುಖ ತಿಳಿವಳಿಕೆ ಒಪ್ಪಂದಗಳನ್ನು (Memorandum of Understanding-MoUs) ವಿನಿಮಯ ಮಾಡಿಕೊಂಡವು.

ಡಿ. 15ರಿಂದ 17ರವರೆಗೆ ಅನುರಾ ಕುಮಾರ ದಿಸ್ಸಾನಾಯಕೆ ಅವರು ಭಾರತ ಪ್ರವಾಸ ಕೈಗೊಂಡಿದ್ದು, ಭಾನುವಾರ (ಡಿ. 15) ಸಂಜೆ ಹೊಸದಿಲ್ಲಿಗೆ ಆಗಮಿಸಿದ್ದರು. ಸೆಪ್ಟೆಂಬರ್‌ನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಇದು ಅವರ ಮೊದಲ ವಿದೇಶ ಭೇಟಿಯಾಗಿದೆ.

ಸುದೀರ್ಘ ಚರ್ಚೆ

ಸೋಮವಾರ ಒಪ್ಪಂದಕ್ಕೆ ಸಹಿ ಹಾಕುವ ಜತೆ ಮೋದಿ ಅವರು ಶ್ರೀಲಂಕಾ ಅಧ್ಯಕ್ಷರ ಜತೆಗೆ ದ್ವಿಪಕ್ಷೀಯ ಚರ್ಚೆ ನಡೆಸಿದರು. ರಕ್ಷಣೆ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ-ಶ್ರೀಲಂಕಾದ ನಡುವೆ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಉಭಯ ನಾಯಕರು ಮಾತುಕತೆ ನಡೆಸಿದರು. ಮಾತುಕತೆಗೂ ಮುನ್ನ ದಿಸ್ಸಾನಾಯಕೆ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಔಪಚಾರಿಕ ಸ್ವಾಗತ ನೀಡಲಾಯಿತು.

ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

“ವ್ಯಾಪಾರ, ಹೂಡಿಕೆ, ಅಭಿವೃದ್ಧಿ ಮತ್ತು ಭದ್ರತಾ ಸಹಕಾರವನ್ನು ಒಳಗೊಂಡ ವ್ಯಾಪಕ ಕಾರ್ಯಸೂಚಿಯನ್ನು ಚರ್ಚಿಸಲಾಗುವುದು” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಮೋದಿ-ದಿಸ್ಸಾನಾಯಕೆ ಮಾತುಕತೆಗೆ ಮುಂಚಿತವಾಗಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದ್ದರು. ಭಾನುವಾರ ಶ್ರೀಲಂಕಾ ಅಧ್ಯಕ್ಷ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಎನ್ಎಸ್ಎ ಅಜಿತ್ ದೋವಲ್ ಅವರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದರು. ಶೀಘ್ರದಲ್ಲಿಯೇ ಅವರು ಶ್ರೀಲಂಕಾದ ಅಧ್ಯಕ್ಷ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ.

ಭಾರತ ಮತ್ತು ಶ್ರೀಲಂಕಾ ನಡುವೆ ಹೂಡಿಕೆ ಹಾಗೂ ವಾಣಿಜ್ಯ ಸಂಪರ್ಕವನ್ನು ಉತ್ತೇಜಿಸಲು ದಿಲ್ಲಿಯಲ್ಲಿ ನಡೆಯಲಿರುವ ವ್ಯಾಪಾರ ಕಾರ್ಯಕ್ರಮದಲ್ಲಿ ದಿಸನಾಯಕ ಭಾಗವಹಿಸಲಿದ್ದಾರೆ. ಬಳಿಕ ಅವರು ಬಿಹಾರದ ಬೋಧ್ ಗಯಾಕ್ಕೂ ಭೇಟಿ ನೀಡಲಿದ್ದಾರೆ.

ದಿಸ್ಸಾನಾಯಕೆ ಅವರ ಭೇಟಿಯ ಸಮಯದಲ್ಲಿ ಕಡಲ ಭದ್ರತಾ ಸಹಕಾರಕ್ಕೆ ಸಂಬಂಧಿಸಿದ ವಿಷಯಗಳು ಚರ್ಚೆಗೆ ಬರುವ ಸಾಧ್ಯತೆಯಿದೆ. ಹಿಂದೂ ಮಹಾಸಾಗರದಲ್ಲಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸುವ ಚೀನಾದ ಪ್ರಯತ್ನಗಳ ಮಧ್ಯೆ ಭಾರತವು ಶ್ರೀಲಂಕಾದೊಂದಿಗೆ ರಕ್ಷಣಾ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ವಿಸ್ತರಿಸುತ್ತಿದೆ. ದೇಶೀಯವಾಗಿ ನಿರ್ಮಿಸಲಾದ ಕಡಲಾಚೆಯ ಗಸ್ತು ಹಡಗುಗಳನ್ನು ಒದಗಿಸುವುದು ಸೇರಿದಂತೆ ಶ್ರೀಲಂಕಾದ ರಕ್ಷಣಾ ಪಡೆಗಳ ವಿವಿಧ ಸಾಮರ್ಥ್ಯ ವರ್ಧನೆ ಕ್ರಮಗಳಿಗೆ ಭಾರತ ಸಹಕಾರ ಒದಗಿಸುತ್ತಿದೆ.

ಮಾರ್ಕ್ಸ್‌ವಾದಿ ನಿಲುವು ಹೊಂದಿರುವ ಪೀಪಲ್ಸ್ ಲಿಬರೇಶನ್ಸ್‌ ಫ್ರಂಟ್‌ ಪಕ್ಷ (People’s Liberation Front-JVP)ದ ನಾಯಕ ಅನುರಾ ಕುಮಾರ ದಿಸ್ಸಾನಾಯಕೆ ಸೆಪ್ಟೆಂಬರ್‌ 22ರಂದು ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಇನ್ನು 54 ವರ್ಷದ ಸಂಸದೆ ಹರಿಣಿ ಅಮರಸೂರ್ಯ ಅವರು ಶ್ರೀಲಂಕಾದ ಪ್ರಧಾನಿಯಾಗಿ ಅದಿಕಾರ ಸ್ವೀಕರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Anura Kumara Dissanayake: ಶ್ರೀಲಂಕಾ ಸಂಸತ್ತು ವಿಸರ್ಜಿಸಿದ ನೂತನ ಅಧ್ಯಕ್ಷ ಅನುರಾ ಕುಮಾರಾ ದಿಸ್ಸಾನಾಯಕೆ; ನವೆಂಬರ್‌ನಲ್ಲಿ ಚುನಾವಣೆ