Friday, 22nd November 2024

Narendra Modi: ಮಹಾತ್ಮ ಗಾಂಧೀಜಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಕೊಡುಗೆ ಸ್ಮರಿಸಿದ ಪ್ರಧಾನಿ ಮೋದಿ

Narendra Modi

ನವದೆಹಲಿ: ಇಂದು (ಅಕ್ಟೋಬರ್‌ 2) ರಾಷ್ಟ್ರಪಿತ ಮಹಾತ್ಮ ಗಾಂಧೀಜಿ (Mahatma Gandhi) ಮತ್ತು ಭಾರತದ ಎರಡನೇ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ (Lal Bahadur Shastri) ಅವರ ಜನ್ಮ ದಿನಾಚರಣೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ಮಹೋನ್ನತ ನಾಯಕರು ದೇಶಕ್ಕಾಗಿ ನೀಡಿದ ಕೊಡುಗೆಗಗಳನ್ನು ಸ್ಮರಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

”ಪೂಜ್ಯ ಬಾಪು ಅವರ ಜನ್ಮ ಜಯಂತಿಯಂದು ಎಲ್ಲ ದೇಶವಾಸಿಗಳ ಪರವಾಗಿ ಅವರಿಗೆ ನಮನಗಳು. ಸತ್ಯ, ಸಾಮರಸ್ಯ ಮತ್ತು ಸಮಾನತೆಯನ್ನು ಆಧರಿಸಿದ ಅವರ ಜೀವನ ಮತ್ತು ಆದರ್ಶಗಳು ಯಾವಾಗಲೂ ನಮಗೆಲ್ಲ ಸ್ಫೂರ್ತಿʼʼ ಎಂದು ಹೇಳಿದ್ದಾರೆ.

ʼʼಸೈನಿಕರು, ರೈತರು ಮತ್ತು ದೇಶದ ಸ್ವಾಭಿಮಾನಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯಂದು ಅವರಿಗೆ ಗೌರವಪೂರ್ವಕ ನಮನಗಳುʼʼ ಎಂದು ಮೋದಿ ಬರೆದುಕೊಂಡಿದ್ದಾರೆ.

1869ರ ಅಕ್ಟೋಬರ್‌ 2ರಂದು ಈಗಿನ ಗುಜರಾತ್‌ನ ಪೋರ್‌ ಬಂದರ್‌ನಲ್ಲಿ ಜನಿಸಿದ ಮಹಾತ್ಮ ಗಾಂಧೀಜಿ ಅವರ ಪೂರ್ಣ ಹೆಸರು ಮೋಹನ್‌ದಾಸ್‌ ಕರಮ್‌ಚಂದ್‌ ಗಾಂಧಿ. ರಾಷ್ಟ್ರಪಿತ ಎಂದೇ ಕರೆಯಲ್ಪಡುವ ಅವರ 155ನೇ ಜನ್ಮ ದಿನಾಚರಣೆ ಇಂದು. ಭಾರತದ ಎರಡನೇ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು 1904ರ ಅಕ್ಟೋಬರ್‌ 2ರಂದು ಈಗಿನ ಉತ್ತರ ಪ್ರದೇಶದ ದೀನ್‌ ದಯಾಳ್‌ ಉಪಾಧ್ಯಾಯ ನಗರ್‌ನಲ್ಲಿ ಜನಿಸಿದರು. ಅವರ ʼಜೈ ಜವಾನ್‌ ಜೈ ಕಿಸಾನ್‌ʼ ಘೋಷ ವಾಕ್ಯ ಇಂದಿಗೂ ಜನಪ್ರಿಯ. ಇಂದು ಅವರ 120ನೇ ಜನ್ಮ ದಿನಾಚರಣೆ.

ವಿವಿಧ ಕಾಮಗಾರಿಗಳಿಗೆ ಚಾಲನೆ

ಸ್ವಚ್ಛ ಭಾರತ ಅಭಿಯಾನ 10 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಸ್ವಚ್ಛ ಭಾರತ್ ದಿವಸ್ 2024ರಲ್ಲಿ ಭಾಗವಹಿಸಲಿರುವ ಅವರು ಹಲವು ನೈರ್ಮಲ್ಯ ಮತ್ತು ಸ್ವಚ್ಛತಾ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಜಲ ಶಕ್ತಿ ಸಚಿವ ಸಿ.ಆರ್‌.ಪಾಟೀಲ್‌ ತಿಳಿಸಿದ್ದಾರೆ.

ʼʼಇದರಲ್ಲಿ ಅಮೃತ್ ಮತ್ತು ಅಮೃತ್ 2.0 ಯೋಜನೆ ಅಡಿಯಲ್ಲಿ ನಗರ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಹೆಚ್ಚಿಸುವ ಗುರಿ ಹೊಂದಿರುವ 6,800 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಕಾಮಗಾರಿಗಳು, ಗಂಗಾ ಜಲಾನಯನ ಪ್ರದೇಶಗಳಲ್ಲಿ ನೀರಿನ ಗುಣಮಟ್ಟ ಹೆಚ್ಚಿಸುವ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುವ 1,550 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ 10 ಯೋಜನೆಗಳು ಮತ್ತು ಗೋಬರ್ಧನ್ ಯೋಜನೆಯಡಿ 1,332 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ 15 ಸಂಕುಚಿತ ಜೈವಿಕ ಅನಿಲ (ಸಿಬಿಜಿ) ಸ್ಥಾವರ ಯೋಜನೆಗಳು ಸೇರಿವೆʼʼ ಎಂದು ಅವರು ಮಾಹಿತಿ ನೀಡಿದ್ದಾರೆ.

ʼʼಸ್ವಚ್ಛತೆಯೆ ಪ್ರಾಮುಖ್ಯತೆಯನ್ನು ದೇಶದ ಮೂಲೆ ಮೂಲೆಗೆ ಪಸರಿಸಲು ಯೋಜನೆ ರೂಪಿಸಲಾಗಿದೆ. ಏಕ್ ಪೆಡ್ ಮಾ ಕೆ ನಾಮ್ ಅಭಿಯಾನದ ಅಡಿಯಲ್ಲಿ ಈಗಾಗಲೇ 45 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆʼʼ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Mahatma Gandhi: ಮಹಾತ್ಮಾ ಗಾಂಧಿ ಕುರಿತ 20 ಕುತೂಹಲಕಾರಿ ಸಂಗತಿಗಳಿವು