Friday, 22nd November 2024

Narendra Modi: ಇಂದು ಜಗತ್ತೇ ಭಾರತದ ಮಾತನ್ನು ಅಲಿಸುತ್ತಿದೆ; ಪ್ರಧಾನಿ ಮೋದಿ ಬಣ್ಣನೆ

Narendra Modi

ಗಾಂಧಿನಗರ: ʼʼಇಂದು ಇಡೀ ಜಗತ್ತು ಭಾರತದತ್ತ ಗಮನ ಹರಿಸುತ್ತಿದೆ. ಭಾರತದ ಮಾತುಗಳನ್ನು ಗಂಭೀರವಾಗಿ ಪರಿಗಣಿಸುತ್ತಿದೆʼʼ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬಣ್ಣಿಸಿದ್ದಾರೆ. ಗುಜರಾತ್‌ನ ಅಮ್ರೇಲಿಯಲ್ಲಿ 4,900 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ʼʼಅಭಿವೃದ್ಧಿ ಯೋಜನೆಗಳು ಜನರ ಜೀವನವನ್ನು ಸುಗಮಗೊಳಿಸುತ್ತವೆ ಮತ್ತು ಆ ಪ್ರದೇಶದ ಬೆಳವಣಿಗೆಯನ್ನು ವೇಗಗೊಳಿಸುತ್ತವೆ. ಬಂದರು ಆಧಾರಿತ ಅಭಿವೃದ್ಧಿ ಯೋಜನೆಯ ಭಾಗವಾಗಿ ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಬಂದರುಗಳನ್ನು ಮೇಲ್ದರ್ಜೇರಿಸಲಾಗುವುದುʼʼ ಎಂದು ಮೋದಿ ಘೋಷಿಸಿದ್ದಾರೆ. ಜಲ ನಿರ್ವಹಣೆ ಕ್ಷೇತ್ರದಲ್ಲಿ ಗುಜರಾತ್‌ನ ಕಾರ್ಯ ದೇಶಕ್ಕೇ ಮಾದರಿ ಎಂದು ಮೋದಿ ತಿಳಿಸಿದ್ದಾರೆ.

ʼʼಜರ್ಮನಿಯ ಚಾನ್ಸಲರ್ ಓಲಾಫ್ ಶೋಲ್ಜ್ ಅವರು ವರ್ಷಕ್ಕೆ 90,000 ಭಾರತೀಯರಿಗೆ ವೀಸಾ ನೀಡುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಅವರುಗೆ ಅಗತ್ಯವಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ನಮ್ಮ ಮೇಲಿದೆʼʼ ಎಂದು ಮೋದಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮೋದಿ ಅವರು ಅಮ್ರೇಲಿ ಜಿಲ್ಲೆಯ ದುಧಾಲಾದಲ್ಲಿ 35 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿದ ಭಾರತ್ ಮಾತಾ ಸರೋವರವನ್ನು ಉದ್ಘಾಟಿಸಿದರು.

ಮಿಲಿಟರಿ ವಿಮಾನದ ಫ್ಯಾಕ್ಟರಿ ಉದ್ಘಾಟನೆ

ಇದಕ್ಕೂ ಮೊದಲು ಗುಜರಾತ್​ನ ವಡೋದರಾದಲ್ಲಿ ಭಾರತದ ಮೊದಲ ಖಾಸಗಿ ಯುದ್ಧ ವಿಮಾನ ತಯಾರಿಕೆಯ ಘಟಕಕ್ಕೆ ಸ್ಪೇನ್ ಪ್ರಧಾನಿ ಪೆಡ್ರೋ ಸಾಂಚೆಜ್ ಮತ್ತು ಭಾರತದ ನರೇಂದ್ರ ಮೋದಿ ಚಾಲನೆ ನೀಡಿದರು. ಟಾಟಾ ಏರ್​ಕ್ರಾಫ್ಟ್ ಕಾಂಪ್ಲೆಕ್ಸ್​ನಲ್ಲಿರುವ ಸಿ-295 ವಿಮಾನ ತಯಾರಿಕೆಯ ಘಟಕ ಇದಾಗಿದೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್​ನ ಕ್ಯಾಂಪಸ್​ನಲ್ಲಿರುವ ಈ ಘಟಕದಲ್ಲಿ ಸ್ಪೇನ್ ಮೂಲದ ವಿಮಾನ ತಯಾರಿಕೆಯ ಸಂಸ್ಥೆ ಏರ್​ಬಸ್ ಸಹಯೋಗದಲ್ಲಿ ಸಿ-295 ಮಿಲಿಟರಿ ವಿಮಾನಗಳನ್ನು ತಯಾರಿಸಲಾಗುತ್ತದೆ. ಈ ಯೋಜನೆಯಲ್ಲಿ 56 ವಿಮಾನಗಳ ತಯಾರಿಕೆಗೆ ಒಪ್ಪಂದವಾಗಿದೆ. ವಡೋದರಾದಲ್ಲಿ ಒಟ್ಟು 40 ಮಿಲಿಟರಿ ವಿಮಾನಗಳನ್ನು ನಿರ್ಮಿಸಿದರೆ, ಏರ್‌ಬಸ್‌ 16 ವಿಮಾನಗಳನ್ನು ನೇರವಾಗಿ ತಲುಪಿಸಲಿದೆ ಎಂದು ಮೂಲಗಳು ತಿಳಿಸಿವೆ.

ಏನಿದು ಸಿ-295 ವಿಮಾನ?

ಸಿ-295 ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾದ 5-10 ಟನ್ ಸಾಮರ್ಥ್ಯದ ಸಾರಿಗೆ ವಿಮಾನವಾಗಿದ್ದು, ಇದನ್ನು ಭಾರತೀಯ ವಾಯುಪಡೆಯ ಹಳೆಯದಾದ Avro-748 ವಿಮಾನದ ಬದಲಿಗೆ ಬಳಸಲಾಗುತ್ತದೆ. 71 ಸೈನಿಕರು ಅಥವಾ 50 ಪ್ಯಾರಾಟ್ರೂಪರ್‌ಗಳನನ್ನು ಕರೆದೊಯ್ಯಲು ಮತ್ತು ಭಾರವಾದ ವಿಮಾನಗಳಿಗೆ ಪ್ರವೇಶಿಸಲಾಗದ ಸ್ಥಳಗಳಿಗೆ ತೆರಳಿ ಲಾಜಿಸ್ಟಿಕ್ ಕಾರ್ಯಾಚರಣೆ ನಡೆಸಲು ಇದನ್ನು ಬಳಸಲಾಗುತ್ತದೆ. ಈ ವಿಮಾನವು 260 ನಾಟ್ ವೇಗದಲ್ಲಿ ಚಲಿಸಬಲ್ಲದು ಮತ್ತು ಸಣ್ಣ ಏರ್ ಸ್ಟ್ರಿಪ್‌ಗಳಲ್ಲಿಯೂ ಕಾರ್ಯನಿರ್ವಹಿಸಬಲ್ಲದು. ಇದನ್ನು ತೇವಾಂಶವಿಲ್ಲದ, ಮೃದುವಾದ ಮತ್ತು ಮರಳು / ಹುಲ್ಲಿನ ಏರ್ ಸ್ಟ್ರಿಪ್‌ಗಳಲ್ಲಿ ಯಶಸ್ವಿಯಾಗಿ ಇಳಿಯಬಹುದು.

ಇದನ್ನು ಹಾರಾಟದ ಐಸಿಯು ಆಗಿಯೂ ಬಳಸಬಹುದಾಗಿದೆ. ಇದರಲ್ಲಿ ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳಿರುತ್ತವೆ. ಎಲ್ಲ ಹವಾಮಾನ ಪರಿಸ್ಥಿತಿಗಳಲ್ಲಿ ಕಾರ್ಯಾಚರಣೆಗಳನ್ನು ಕೈಗೊಳ್ಳಬಹುದು ಎನ್ನುವುದು ಮತ್ತೊಂದು ವಿಶೇಷ. ಜತೆಗೆ ಇದು ಒಮ್ಮೆ ಇಂದನ ತುಂಬಿದರೆ ನಿರಂತರ 11 ಗಂಟೆ ಕಾಲ ಹಾರಾಡಬಲ್ಲುದು.

ವಡೋದರದ ಟಾಟಾ ಏರ್‌ಕ್ರಾಫ್ಟ್‌ ಕಾಂಪ್ಲೆಕ್ಸ್‌

ವಡೋದರದ ಟಾಟಾ ಏರ್‌ಕ್ರಾಫ್ಟ್‌ ಕಾಂಪ್ಲೆಕ್ಸ್‌ (Tata Aircraft Complex)ನಲ್ಲಿ ಯುದ್ದ ವಿಮಾನಕ್ಕೆ ಸಂಬಂಧಿಸಿದ ಸಂಪೂರ್ಣ ಕೆಲಸ ನಡೆಯಲಿದೆ. ಜೋಡಣೆ, ಪರೀಕ್ಷೆ, ನಿರ್ವಹಣೆ ಇಲ್ಲಿ ನಡೆಯಲಿದೆ. ಮೊದಲ ಸಿ -295 ವಿಮಾನವು 2026ರ ಸೆಪ್ಟೆಂಬರ್‌ನಲ್ಲಿ ಹಾರಾಟಕ್ಕೆ ಸಿದ್ದವಾಗಲಿದೆ. ಉಳಿದ 39 ವಿಮಾನಗಳನ್ನು 2031ರ ಆಗಸ್ಟ್‌ನಲ್ಲಿ ತಯಾರಾಗಲಿವೆ.

ಈ ಸುದ್ದಿಯನ್ನೂ ಓದಿ: DY Chandrachud: ಮೋದಿ ಜತೆ ಗಣಪತಿ ಪೂಜೆ ಮಾಡಿದ್ದನ್ನು ಟೀಕಿಸಿದರಿಗೆ ಖಡಕ್‌ ಉತ್ತರ ಕೊಟ್ಟ ಸಿಜೆಐ