Sunday, 15th December 2024

ಯುವರಾಜ ಬೇರೆ ದಾರಿಯಿಲ್ಲದೆ ವಯನಾಡ್‌ನಿಂದ ಕಣಕ್ಕಿಳಿದಿದ್ದಾರೆ: ನರೇಂದ್ರ ಮೋದಿ

ಮುಂಬೈ: ಅಮೇಠಿ ಲೋಕಸಭೆ ಕ್ಷೇತ್ರದಿಂದ ತೆರಳಿದಂತೆ ವಯನಾಡ್‌ನಿಂದಲೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ  ಹೊರನಡೆಯಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದ ನಾಂದೇಡ್‌ನಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಮೋದಿ, ‘ಕಾಂಗ್ರೆಸ್‌ ಯುವರಾಜ ಬೇರೆ ದಾರಿಯಿಲ್ಲದೆ ವಯನಾಡ್‌ನಿಂದ ಕಣಕ್ಕಿಳಿದಿದ್ದಾರೆ. ಆದರೆ, ಅಮೇಠಿಯಿಂದ ಹೊರನಡೆದಂತೆ ವಯನಾಡ್‌ನಿಂದಲೂ ತೆರಳಲಿದ್ದಾರೆ’ ಎಂದು ಕಿಚಾಯಿಸಿದ್ದಾರೆ.

ತಮ್ಮ ಭಾಷಣದಲ್ಲಿ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷಗಳ ಮೈತ್ರಿಕೂಟ ‘ಐಎನ್‌ಡಿಐಎ-ಇಂಡಿಯಾ’ ವಿರುದ್ಧವೂ ಗುಡುಗಿದ್ದಾರೆ.

‘ದಲಿತರು, ಬಡವರು ಹಾಗೂ ನಿರ್ಗತಿಕರ ಏಳಿಗೆಗೆ ಕಾಂಗ್ರೆಸ್‌ ತಡೆಗೋಡೆಯಾಗಿದೆ’ ಎಂದು ಆರೋಪಿಸಿರುವ ಪ್ರಧಾನಿ, ‘ಐಎನ್‌ ಡಿಐಎ ಒಕ್ಕೂಟ ಮತ ಬ್ಯಾಂಕ್‌ ರಾಜಕೀಯವನ್ನಷ್ಟೇ ನಂಬಿದೆ’ ಎಂದಿದ್ದಾರೆ. ಹಾಗೆಯೇ, ಕಾಂಗ್ರೆಸ್‌ ಈಗಲೂ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ವಿರೋಧಿಸುತ್ತಿದೆ ಎಂದು ದೂರಿದ್ದಾರೆ.

‘ಕಾಂಗ್ರೆಸ್‌ನವರು ಯಾವುದೇ ಸಮಸ್ಯೆಗಳನ್ನು ಇತ್ಯರ್ಥಪಡಿಸುತ್ತಾರೆ ಎಂದು ಯಾರೊಬ್ಬರೂ ನಂಬುವುದಿಲ್ಲ. ಜನರು ಅವರಿಂದ ಅಭಿವೃದ್ಧಿಯ ದೃಢ ನಿರೀಕ್ಷೆಗಳನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

‘ಕಾಂಗ್ರೆಸ್‌ ಪಕ್ಷವು ಬೇಕಂತಲೇ ಈ ಪ್ರದೇಶಗಳ ಅಭಿವೃದ್ಧಿಯನ್ನು ದಶಕಗಳಿಂದ ಕಡೆಗಣಿಸಿದೆ. ಮರಾಠವಾಡ ಹಾಗೂ ವಿದರ್ಭ ದಲ್ಲಿ ನೀರಿನ ಸಮಸ್ಯೆ ಉಂಟಾಗಿರು ವುದಕ್ಕೆ, ಇಲ್ಲಿನ ರೈತರು ಬಡವರಾಗಿಯೇ ಉಳಿದಿರುವುದಕ್ಕೆ ಕಾಂಗ್ರೆಸ್‌ ಯೋಜನೆಗಳೇ ಕಾರಣ. ಕೈಗಾರಿಕಾ ಅಭಿವೃದ್ಧಿಯನ್ನು ಅವರಿಂದ ನಿರೀಕ್ಷಿಸಲು ಸಾಧ್ಯವೇ ಇಲ್ಲ’ ಎಂದು ಗುಡುಗಿದ್ದಾರೆ.

ಇದೇ ವೇಳೆ ಅವರು, ತಮ್ಮ ಸರ್ಕಾರ ನಾಂದೇಡ್‌ನ ಶೇ 80ರಷ್ಟು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿದೆ ಎಂದು ಹೇಳಿ ಕೊಂಡಿದ್ದಾರೆ.

ಅಮೇಠಿ ಲೋಕಸಭೆ ಕ್ಷೇತ್ರದಲ್ಲಿ ಸತತ ಮೂರು ಬಾರಿ (2004, 2009, 2014ರಲ್ಲಿ) ಜಯ ಗಳಿಸಿ ‘ಹ್ಯಾಟ್ರಿಕ್‌’ ಸಾಧನೆ ಮಾಡಿದ್ದ ರಾಹುಲ್‌ ಗಾಂಧಿ, 2019ರ ಚುನಾವಣೆಯಲ್ಲಿ ಸ್ಮೃತಿ ಇರಾನಿ ವಿರುದ್ಧ 55 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಮಣಿ ದಿದ್ದರು.‌ ಆದರೆ, 2019ರಲ್ಲಿ ಅಮೇಠಿ ಜೊತೆಗೆ ವಯನಾಡ್‌ ಕ್ಷೇತ್ರದಿಂದಲೂ ಕಣಕ್ಕಿಳಿದಿದ್ದ ರಾಹುಲ್‌, ಸಿಪಿಐ ಅಭ್ಯರ್ಥಿ ಪಿ.ಪಿ. ಸುನೀರ್‌ ವಿರುದ್ಧ 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ಲೋಕಸಭೆ ಪ್ರವೇಶಿಸಿದ್ದರು.