ನವದೆಹಲಿ: ಕರ್ನಾಟಕದ ಇಬ್ಬರು ಸಾಧಕಿಯರು ಸೇರಿದಂತೆ 29 ಮಹಿಳಾ ಸಾಧಕಿಯರಿಗೆ (2020 ಮತ್ತು 2021ನೇ ಸಾಲಿನ) ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಂಗಳವಾರ ನಾರಿಶಕ್ತಿ ಪುರಸ್ಕಾರ ಪ್ರದಾನ ಮಾಡಿದರು.
ಸಾಫ್ಟ್‌ವೇರ್ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಾಗಿ ಕರ್ನಾಟಕದ ಇಂಟೆಲ್ ಇಂಡಿಯಾ ಕಂಪನಿಯ ಕಂಟ್ರಿಹೆಡ್ ಆಗಿರುವ ನಿವೃತ್ತಿ ರಾಯ್ ಮತ್ತು ಮಹಿಳೆಯರ ಸಬಲೀಕರಣ ಮತ್ತು ದೇವದಾಸಿ ಪದ್ಧತಿಯ ನಿರ್ಮೂಲನೆಗೆ ಶ್ರಮಿಸುತ್ತಿರುವ ಬೆಳಗಾವಿ ಮೂಲದ ಶೋಭಾ ಗಸ್ತಿ ಅವರು ನಾರಿಶಕ್ತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಗಸ್ತಿ ಅವರು 2020ನೇ ಸಾಲಿನ ಹಾಗೂ ನಿವೃತ್ತಿ ರಾಯ್ ಅವರು 2021ನೇ ಸಾಲಿನ ಪುರಸ್ಕಾರಕ್ಕೆ ಭಾಜನ ರಾದರು.
ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಶ್ರಮಿಸುವ ಮಹಿಳೆಯರು ಮತ್ತು ಸಂಸ್ಥೆ ಗಳನ್ನು ಗೌರವಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಾರಿಶಕ್ತಿ ಪುರಸ್ಕಾರ ಆರಂಭಿಸಿದೆ.
ನಾರಿಶಕ್ತಿ ಪುರಸ್ಕೃತರಲ್ಲಿ ಹಾವುಗಳ ಮೊದಲ ರಕ್ಷಕಿ ಎಂಬ ಖ್ಯಾತಿಯ ಹಾಗೂ ಪರಿಸರ ಮತ್ತು ಅರಣ್ಯ ಜೀವಿಗಳ ರಕ್ಷಣೆಗಾಗಿ ಸ್ಥಾಪಿಸಿರುವ ಸಾಯ್‌ರೇ ವಂಚರೆ ಫೌಂಡೇಷನ್ ಸಂಸ್ಥಾಪಕಿ ವನಿತಾ ಜಗದೇವೊ ಬರೋಡೆ, ಕಥಕ್ ನೃತ್ಯಗಾರ್ತಿ ಸಾಯ್ಲೀ ನಂದಕಿಶೋರ್ ಅಗವಾನೆ, ಸಾವಯವ ಕೃಷಿ ಮಾಡುವ ಉಷಾಬೆನ್ ದಿನೇಶ್ ಭಾಯಿ ವಾಸವ ಸೇರಿದಂತೆ ಇತರರು ಸೇರಿದ್ದಾರೆ. ಜಗದೇವೋ ಬರೋಡೆ ಅವರು 50 ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಣೆ ಮಾಡಿ, ಅವುಗಳನ್ನು ಕಾಡಿಗೆ ಬಿಟ್ಟಿದ್ದಾರೆ.