Saturday, 23rd November 2024

ನವನೀತ್ ಕಲ್ರಾ ಜಾಮೀನು ಅರ್ಜಿ ವಿಚಾರಣೆ 28ಕ್ಕೆ

ನವದೆಹಲಿ: ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳ ಅಕ್ರಮ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿ, ಉದ್ಯಮಿ ನವನೀತ್ ಕಲ್ರಾ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ನ್ಯಾಯಾಲಯ ಇದೇ 28ಕ್ಕೆ ಮುಂದೂಡಿದೆ.

ಕಾಲ್ರಾ ಒಡೆತನದ ಖಾನಾ ಚಾಚಾ, ಟೌನ್‌ ಹಾಲ್‌, ನೇಗಿ ಮತ್ತು ಜೂ ರೆಸ್ಟೊರೆಂಟ್‌ಗಳಿಂದ ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಸಂಬಂಧ ಕಾಲ್ರಾ ಅವರನ್ನು ಜೂನ್‌ 3ರ ತನಕ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸ್ವಾತಿ ಶರ್ಮಾ ಅವರು,’ ಕಾಲ್ರಾ ಪರ ವಕೀಲರಾದ ವಿಶಾಲ್‌ ಗೋರಿ ಮನವಿ ಮೇರೆಗೆ ಜಾಮೀನು ಅರ್ಜಿ ವಿಚಾರಣೆಯನ್ನು ಮೇ 28ರವರೆಗೆ ಮುಂದೂಡಿದ್ದಾರೆ. ಮೇ 20 ಮತ್ತು 22 ರಂದು ಎರಡು ಬಾರಿ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿತ್ತು.

ನ್ಯಾಯಾಂಗ ಬಂಧನವನ್ನು ಐದು ದಿನಗಳ ಕಾಲ ವಿಸ್ತರಿಸುವಂತೆ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಮೇ 22 ರಂದು ತಿರಸ್ಕರಿಸಿತ್ತು.