ಪಣಜಿ: ಗೋವಾ ವಿಧಾನಸಭಾ ಚುನಾವಣೆ ಮುನ್ನವೇ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್‌ಸಿಪಿ) ಮತ್ತು ಶಿವಸೇನೆ ಬುಧವಾರ ಚುನಾವಣಾ ಪೂರ್ವ ಮೈತ್ರಿ ಘೋಷಿಸಿ ಚುನಾವಣೆಯಲ್ಲಿ ಜಂಟಿ ಯಾಗಿ ಸ್ಪರ್ಧಿಸುವುದಾಗಿ ಹೇಳಿವೆ.
ಪಣಜಿಯಲ್ಲಿ ಜಂಟಿಯಾಗಿ ಮಾತನಾಡಿದ ಶಿವಸೇನಾ ರಾಜ್ಯಸಭಾ ಸಂಸದ ಸಂಜಯ್ ರಾವುತ್ ಮತ್ತು ಎನ್‌ಸಿಪಿಯ ಹಿರಿಯ ನಾಯಕ ಪ್ರಫುಲ್ ಪಟೇಲ್, ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ(ಎಂವಿಎ) ಮೈತ್ರಿಯನ್ನು ಗೋವಾಗೆ ವಿಸ್ತರಿಸುವ ಸಲುವಾಗಿ ಎರಡು ಪಕ್ಷಗಳು ಕಾಂಗ್ರೆಸ್‌ನ್ನು ಸಂಪರ್ಕಿಸಿದ್ದವು, ಆದರೆ ಕಾಂಗ್ರೆಸ್ ನಾಯಕರು ಯಾವುದೆ ಪ್ರತಿಕ್ರಿಯೆ ನೀಡಲಿಲ್ಲ. ಹಾಗಾಗಿ ಈ ಎರಡು ಪಕ್ಷಗಳು ಮೈತ್ರಿ ನಿರ್ಧಾರ ತೆಗೆದುಕೊಂಡೆವು ಎಂದು ಹೇಳಿದರು.
‘ನಾವು ಎಂವಿಎಯನ್ನು ಮಹಾರಾಷ್ಟ್ರದಿಂದ ಗೋವಾಕ್ಕೆ ವಿಸ್ತರಿಸಬೇಕೆಂದು ಯೋಚಿಸಿದ್ದೇವೆ. ಕಾಂಗ್ರೆಸ್ ಕೂಡ ಪ್ರಮುಖ ಪಾತ್ರ ವಹಿಸಬೇಕು ಮತ್ತು ನಾವು (ಎನ್‌ಸಿಪಿ ಮತ್ತು ಶಿವಸೇನೆ) ಕೆಲವು ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ’ ಎಂದು ಪಟೇಲ್ ಹೇಳಿದರು.
ಮುಂದಿನ ತಿಂಗಳು ಚುನಾವಣೆ ನಡೆಯಲಿರುವ 40 ಸ್ಥಾನಗಳಲ್ಲಿ ಎರಡೂ ಪಕ್ಷಗಳು ತಲಾ 10-12 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಎಂದು ರಾವುತ್ ಮಾಹಿತಿ ನೀಡಿದರು. ಗೋವಾ ವಿಧಾನಸಭೆಗೆ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.