ಸಸಾರಾಂ(ಬಿಹಾರ): ಬಿಹಾರದ ಸಸಾರಾಂನಲ್ಲಿ ಪ್ರಥಮ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಚುನಾವಣೆಗೆ ಮುನ್ನವೇ ಎನ್‍ಡಿಎ ಜಯಭೇರಿಯ ಸ್ಪಷ್ಟ ಮುನ್ಸೂಚನೆಗಳು ಗೋಚರಿಸುತ್ತಿವೆ. ಜೆಡಿಯು ಮತ್ತು ಬಿಜೆಪಿ ನೇತೃತ್ವದ ಎನ್‍ಡಿಎ ಮತ್ತೆ ಅಧಿಕಾರಕ್ಕೆ ಬರುವುದು ಶತಃಸಿದ್ಧ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಬಿಹಾರ ವಿಧಾನಸಭಾ ಚುನಾವಣೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಎನ್‍ಡಿಎ ಮಿತ್ರಕೂಟದ ಪರವಾಗಿ ಪಾಂಚಜನ್ಯ ಮೊಳಗಿಸಿದ್ದಾರೆ. ರಾಷ್ಟ್ರೀಯ ಜನತಾದಳ ಅಧಿಕಾರದಲ್ಲಿ ಇದ್ಧಾಗ ದುರ್ಬಲ ಕಾನೂನು ಮತ್ತು ಸುವ್ಯವಸ್ಥೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿ ದ್ದರು. ಬಿಹಾರವನ್ನು ಬಿಮಾರಿಗೆ (ರೋಗಕ್ಕೆ) ಒಳಪಡಿಸಿದ ಹಿನ್ನೆಲೆ ಹೊಂದಿರುವವರನ್ನು ಮತ್ತೆ ಅಧಿಕಾರಕ್ಕೆ ತರಬಾರದೆಂದು ಬಿಹಾರದ ಜನತೆ ನಿರ್ಧರಿಸಿದ್ದಾರೆ ಎಂದು ಮೋದಿ ಹೇಳಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಲು ಕೇಂದ್ರ ಸರ್ಕಾರ 370ನೇ ವಿಧಿಯನ್ನು ತೆಗೆದು ಹಾಕಿರುವುದನ್ನು ಸಮರ್ಥಿಸಿಕೊಂಡರು. ಭಾರತವನ್ನು ದುರ್ಬಲಗೊಳಿಸಲು ಯತ್ನಿಸುತ್ತಿರುವ ಶಕ್ತಿಗಳೊಂದಿಗೆ ಪ್ರತಿಪಕ್ಷಗಳು ಕೈಜೋಡಿಸಿವೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ರ್ಯಾಲಿ ಆರಂಭಕ್ಕೆ ಮುನ್ನ ನಿಧನರಾದ ಎಲ್‍ಜೆಪಿ ಸಂಸ್ಥಾಪಕ ರಾಮ್‍ವಿಲಾಸ್ ಪಾಸ್ವಾನ್ ಮತ್ತು ಆರ್‍ಜೆಡಿ ಮಾಜಿ ನಾಯಕ ರಘುವಂಶ ಪ್ರಸಾದ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಬಿಹಾರ ಚುನಾವಣೆಗಾಗಿ ಪ್ರಧಾನಿ ಒಟ್ಟು 12 ರ್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ. ಅಕ್ಟೋಬರ್ 28ರಂದು ಧರ್ಬಾಂಗ, ಮುಝಪರ್‍ಪುರ್ ಮತ್ತು ಪಾಟ್ನಾಗಳಲ್ಲಿ ರ್ಯಾಲಿ ನಡೆಸುವರು. ನವಂಬೆರ್3ರಂದು ಛಾಪ್ರಾ, ಪೂರ್ವ ಚಂಪಾರಣ್ ಮತ್ತು ಸಮಷ್ಟಿಪುರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುವ ಕಾರ್ಯಕ್ರಮವಿದೆ. 243 ಕ್ಷೇತ್ರಗಳ ಬಿಹಾರ ಚುನಾವಣೆಗೆ ಅ.28, ನ.3 ಮತ್ತು ನ.7ರಂದು ಮೂರು ಹಂತಗಳಲ್ಲಿ ಚುನಾವಣೆಗಳು ನಡೆಯಲಿದ್ದು, ನ.10ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.