ನವದೆಹಲಿ: ಎನ್‍ಡಿಎ ಮುಖಂಡರ ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗರಿಷ್ಠ ಸ್ಥಾನ ಗಳನ್ನು ಗೆಲ್ಲುವ ಗುರಿ ನಿಗದಿಪಡಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‍ಡಿಎ) ಸಂಸದರ ಸಭೆ ಮುಕ್ತಾಯಗೊಂಡಿದ್ದು ಸಭೆಯಲ್ಲಿ ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಮತ್ತು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲುವ ಗುರಿ ನೀಡಲಾಗಿದೆ.
ಬಿಜೆಪಿ ಸಂಸದ ಸುಕಾಂತ ಮಜುಂದಾರ್ ಅವರು, ಇಂದು ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒಡಿಶಾದ ಎನ್‍ಡಿಎ ಸಂಸದರ ಸಭೆ ಇತ್ತು. ಸಭೆಯಲ್ಲಿ ಪ್ರತಿ ರಾಜ್ಯಕ್ಕೆ ಸಂಬಂಧಿಸಿದ ಎರಡು ವೀಡಿಯೊಗಳನ್ನು ತೋರಿಸ ಲಾಗಿದೆ, ಒಂದು ವಿಡಿಯೋದಲ್ಲಿ ಕೇಂದ್ರ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ತೋರಿಸ ಲಾಗಿದೆ ಮತ್ತು ಈ ರಾಜ್ಯ ಸರ್ಕಾರಗಳು ಮಾಡಿದ ಭ್ರಷ್ಟಾಚಾರವನ್ನು ಎರಡನೇ ವೀಡಿಯೊದಲ್ಲಿ ತೋರಿಸ ಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಾರಿ ನಾವು ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಮತ್ತು ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕಾಗಿದೆ ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ ಎಂದು ಮಜುಂದಾರ್ ತಿಳಿಸಿದ್ದಾರೆ.