Thursday, 12th December 2024

ಪ್ರತ್ಯೇಕ ರಾಜ್ಯದ ಬೇಡಿಕೆಯಲ್ಲಿ ತಪ್ಪೇನಿಲ್ಲ: ನೀಫಿಯು ರಿಯೋ

ಕೊಹಿಮಾ: ನಾಗಾಲ್ಯಾಂಡ್ ರಾಜ್ಯದ ಪೂರ್ವ ಪ್ರಾಂತ್ಯದ ಜನರು ಪ್ರತ್ಯೇಕ ರಾಜ್ಯಕ್ಕೆ ಮುಂದಿಟ್ಟಿರುವ ಬೇಡಿಕೆಯಲ್ಲಿ ತಪ್ಪೇನಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ನೀಫಿಯು ರಿಯೋ ಹೇಳಿದ್ದಾರೆ.

“ನಾವು ನಾಗಾಗಳು, ಮನಸ್ಸಿನಲ್ಲಿದ್ದುದನ್ನು ಹೇಳಿ ಬಿಡುತ್ತೇವೆ. ಪೂರ್ವ ನಾಗಾಲ್ಯಾಂಡ್ ಜನರು ತಮಗೆ ಅನಿಸಿದ್ದನ್ನು ಹೇಳಿದ್ದರೆ ತಪ್ಪಿಲ್ಲ, ಈ ಎಲ್ಲಾ ವಿಚಾರಗಳನ್ನು ಪರಿಹರಿಸ ಲಾಗುವುದು” ಎಂದು ಹೇಳಿದರು.

ಪ್ರತ್ಯೇಕ ರಾಜ್ಯ ಬೇಡಿಕೆಗೆ ಬೆಂಬಲಿಸಿ ಆ ಪ್ರಾಂತ್ಯದ 20 ಶಾಸಕರಿಗೆ ರಾಜೀನಾಮೆ ನೀಡು ವಂತೆ ಸೂಚಿಸಿರುವ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಕೇಂದ್ರ ಗೃಹ ಸಚಿವರ ಪ್ರಸ್ತಾವಿತ ರಾಜ್ಯ ಭೇಟಿಯ ಸಂದರ್ಭ ಅವರ ಜೊತೆಗೆ ಚರ್ಚೆಗೆ ಸಮಯ ನಿಗದಿ ಪಡಿಸುತ್ತೇವೆ. ಪ್ರಧಾನಿ ಬಂದರೆ ಅವರೊಂದಿಗೆ ಕೂಡ ಮಾತನಾಡಲು ಮನವಿ ಮಾಡಲಾಗುವುದು ಎಂದರು.

ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವುದರಿಂದ ಪೂರ್ವ ನಾಗಾಲ್ಯಾಂಡ್ ಅನ್ನು ಪ್ರತ್ಯೇಕ ರಾಜ್ಯವನ್ನಾಗಿಸಬೇಕೆಂಬ ಆಗ್ರಹ ಮುಗಿಲು ಮುಟ್ಟಿದೆ.

ಪೂರ್ವ ನಾಗಾಲ್ಯಾಂಡ್‍ನ ಆರು ಜಿಲ್ಲೆಗಳೆಂದರೆ ಮೊನ್, ತೂಯೆನ್ಸಂಗ್, ಕಿಫೈರ್, ಲೊಂಗ್ಲೆಂಗ್, ನೊಕ್ಲಕ್ ಮತ್ತು ಶಮಟೋರ್. ಈ ಭಾಗಗಳಲ್ಲಿ ಚಂಗ್, ಖಿಯಾಮ್ನಿಯುಂಗನ್, ಕೊನ್ಯಕ್, ಫೊಮ್, ಸಂಗ್ಟಮ್, ಟಿಖಿರ್ ಮತ್ತು ಯಿಂಖಿಯುಂಗ್ ಆದಿವಾಸಿಗಳು ವಾಸಿಸುತ್ತಾರೆ.