Sunday, 15th December 2024

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೆದರ್ಲ್ಯಾಂಡ್ ಯುವತಿ- ಯುಪಿ ಯುವಕ

ಕ್ನೋ: ಉತ್ತರ ಪ್ರದೇಶ ಮೂಲದ ಯುವಕನೊಬ್ಬ ನೆದರ್ಲ್ಯಾಂಡ್ ಮೂಲದ ಯುವತಿಯನ್ನು ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಉತ್ತರ ಪ್ರದೇಶದ ಫತೇಪುರದ ಹಳ್ಳಿಯಲ್ಲಿ ವಾಸವಾಗಿದ್ದ ಹಾರ್ದಿಕ್ ವರ್ಮಾ(32) ಕೆಲಸದ ನಿಮಿತ್ತ ನೆದರ್‌ಲ್ಯಾಂಡ್‌ಗೆ ತೆರಳಿದ್ದರು.

ಅಲ್ಲಿ ಫಾರ್ಮಾಸ್ಯುಟಿಕಲ್ ಕಂಪನಿಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಪಡೆದುಕೊಂಡಿದ್ದರು. ಈ ವೇಳೆ ಅದೇ ಕಂಪೆನಿಯಲ್ಲಿದ್ದ ನೆದರ್‌ಲ್ಯಾಂಡ್‌ ಮೂಲದ ಗೇಬ್ರಿಯೆಲಾ ದುಡಾ(21) ಅವರ ಪರಿಚಯವಾಗಿದೆ. ಪ್ರತಿನಿತ್ಯ ಕೆಲಸ ಮಾಡುತ್ತಾ, ಆತ್ಮೀಯತೆಯಲ್ಲಿ ಇದ್ದ ಇಬ್ಬರಲ್ಲಿ ಪ್ರೀತಿ ಹುಟ್ಟಿದೆ. ಹಾರ್ದಿಕ್‌ ಅವರು ತನ್ನ ಪ್ರೀತಿಯನ್ನು ಮೊದಲು ಗೇಬ್ರಿಯೆಲಾ ಅವರಲ್ಲಿ ಪ್ರಸ್ತಾಪ ಮಾಡಿದ್ದಾರೆ. ಅವರು ಕೂಡ ಹಾರ್ದಿಕ್‌ ಅವರನ್ನು ಇಷ್ಟಪಟಿದ್ದಾರೆ. ಮೂರು ವರ್ಷ ಸಹಜೀವನವಾಗಿ ಜೊತೆಗಿದ್ದ ಇಬ್ಬರು ಮದುವೆಯಾಗುವ ನಿಟ್ಟಿನಲ್ಲಿ ಕಳೆದ ವಾರ ಭಾರತಕ್ಕೆ ಬಂದಿದ್ದಾರೆ.

ಕುಟುಂಬದವರ ಒಪ್ಪಿಗೆಯ ಮೇರೆ ಹಿಂದೂ ಸಂಪ್ರದಾಯದಂತೆ ಎಲ್ಲಾ ವೈವಾಹಿಕ ವಿಧಿಗಳನ್ನು ಪೂರ್ಣಗೊಳಿಸಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಫತೇಪುರದಲ್ಲಿ ಹಾರ್ದಿಕ್‌ ಅವರ ಪೂರ್ವಜರ ಮನೆ ಇದೆ. ಅದಕ್ಕಾಗಿ ಅವರು ಅಲ್ಲಿಯೇ ವಿವಾಹವಾಗಿದ್ದಾರೆ.

ಡಿ.11 ರಂದು ಗಾಂಧಿನಗರದಲ್ಲಿ ಆರತಕ್ಷತೆಯನ್ನು ಆಯೋಜಿಸಲಾಗಿದೆ. ಇದರಲ್ಲಿ ಗೇಬ್ರಿಯೆಲಾ ಅವರ ತಂದೆ ಮಾರ್ಸಿನ್ ದುಡಾ, ಅವರ ತಾಯಿ ಬಾರ್ಬರಾ ದುಡಾ ಮತ್ತು ಇತರ ಕುಟುಂಬ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಇದೆಲ್ಲಾ ಆದ ಬಳಿಕ ಡಿ.25 ನಾವು ನೆದರ್‌ಲ್ಯಾಂಡ್‌ಗೆ ತೆರಳಿದ್ದೇವೆ. ಅಲ್ಲಿ ಚರ್ಚ್‌ ನಲ್ಲಿ ಕ್ರೈಸ್ತ ಸಂಪ್ರದಾಯದಂತೆ ವಿವಾಹವಾಗಲಿದ್ದೇವೆ ಎಂದು ಹಾರ್ದಿಕ್‌ ಹೇಳಿದ್ದಾರೆ.