Sunday, 15th December 2024

ಹೊಸ ಕೋವಿಡ್‌ ಭೀತಿ: ಕುಸಿತ ಕಂಡ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ

ನವದೆಹಲಿ: ಬ್ರಿಟನ್‌ನಲ್ಲಿ ಹೊಸ ಕೋವಿಡ್ ಸೋಂಕು ಕಾಣಿಸಿಕೊಂಡ ಬಳಿಕ ಭಾರತೀಯ ಷೇರುಪೇಟೆಯಲ್ಲಿ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಬರೋಬ್ಬರಿ 1406 ಪಾಯಿಂಟ್ಸ್ ಕುಸಿತ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 432.15 ಪಾಯಿಂಟ್ಸ್‌ ಇಳಿಕೆಗೊಂಡಿದೆ.

ಬಿಎಸ್‌ಇ ಸೂಚ್ಯಂಕವಾದ ಸೆನ್ಸೆಕ್ಸ್ 1,406.73 ಪಾಯಿಂಟ್ಸ್ ಅಥವಾ ಶೇಕಡಾ 3ರಷ್ಟು ಇಳಿಕೆಗೊಂಡು 45,553.73 ಪಾಯಿಂಟ್ಸ್‌ಗೆ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 432.15 ಪಾಯಿಂಟ್ಸ್ ಅಥವಾ ಶೇಕಡಾ 3.14ರಷ್ಟು ಕುಸಿದು 13,328.40 ಪಾಯಿಂಟ್ಸ್‌ಗೆ ತಲುಪಿದೆ.

ಷೇರುಪೇಟೆಯಲ್ಲಿ 580 ಷೇರುಗಳು ಲಾಭಗಳಿಸಿದರೆ, 2,381 ಷೇರುಗಳು ಕುಸಿತಗೊಂಡಿವೆ. ಒಎನ್‌ಜಿಸಿ, ಟಾಟಾ ಮೋಟಾರ್ಸ್, ಗೇಲ್, ಹಿಂಡಾಲ್ಕೊ ಮತ್ತು ಐಒಸಿ ನೇತೃತ್ವದಲ್ಲಿ ನಿಫ್ಟಿ 50 ನಲ್ಲಿನ ಎಲ್ಲಾ ಷೇರುಗಳು ಕುಸಿತಗೊಂಡಿವೆ.

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಭಾರಿ ಮಾರಾಟದ ಮಧ್ಯೆ ಭಾರತೀಯ ರೂಪಾಯಿ 21 ಪೈಸೆ ಇಳಿಕೆಯಾಗಿ ಪ್ರತಿ ಡಾಲರ್‌ಗೆ 73.78 ಕ್ಕೆ ತಲುಪಿದೆ. ಇದು ಶುಕ್ರವಾರದ 73.57 ರ ವಿರುದ್ಧ 18 ಪೈಸೆ ಕಡಿಮೆಯಾಗಿ 73.75 ಕ್ಕೆ ವಹಿವಾಟು ಆರಂಭಿಸಿ 73.64-73.82 ವ್ಯಾಪ್ತಿಯಲ್ಲಿ ಉಳಿಯಿತು.