Sunday, 15th December 2024

ಸಿಬಿಐ ಅಧಿಕಾರಿ, ಸಿಬ್ಬಂದಿಗೆ ಹೊಸ ವಸ್ತ್ರ ಸಂಹಿತೆ ಜಾರಿ

ನವದೆಹಲಿ: ಕೇಂದ್ರಿಯ ತನಿಖಾ ದಳ (ಸಿಬಿಐ) ಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಹೊಸ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ.

ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಚೇರಿಗೆ ಬರುವ ಸಂದರ್ಭದಲ್ಲಿ ಜೀನ್ಸ್, ಟೀ ಶರ್ಟ್, ಸ್ಪೋರ್ಟ್ಸ್ ಶೂಗಳಂಥ ಯಾವುದೇ ಉಡುಪುಗಳನ್ನು ಧರಿಸು ವಂತಿಲ್ಲ. ಹಾಗೆಯೇ ಗಡ್ಡ ಬೆಳೆಸುವಂತಿಲ್ಲ ಎಂದು ಸಿಬಿಐನ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಸೂಚನೆ ನೀಡಿದ್ದಾರೆ.

ಪುರುಷರು ಶರ್ಟ್, ಫಾರ್ಮಲ್ ಪ್ಯಾಂಟ್ ಮತ್ತು ಫಾರ್ಮಲ್ ಶೂಗಳನ್ನು ಧರಿಸಿ, ಗಡ್ಡವನ್ನು ಸಂಪೂರ್ಣವಾಗಿ ತೆಗೆದು ಕಚೇರಿಗೆ ಬರಬೇಕಾಗಿದೆ. ಸಿಬಿಐನ ಮಹಿಳಾ ಉದ್ಯೋಗಿಗಳು ಸೀರೆ, ಸೂಟ್, ಫಾರ್ಮಲ್ ಶರ್ಟ್ ಮತ್ತು ಪ್ಯಾಂಟ್ ಮಾತ್ರ ಧರಿಸಲು ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ.

“ಯಾವುದೇ ಜೀನ್ಸ್, ಟೀ ಶರ್ಟ್, ಸ್ಪೋರ್ಟ್ಸ್ ಶೂಗಳು, ಚಪ್ಪಲಿಗಳನ್ನು ಧರಿಸಿ ಕಚೇರಿಗೆ ಬರಲು ಅನುಮತಿ ನೀಡಲಾಗುವುದಿಲ್ಲ ಎಂದು ಕೂಡ ಆದೇಶದಲ್ಲಿ ತಿಳಿಸಲಾಗಿದೆ. ದೇಶಾದ್ಯಂತ ಸಿಬಿಐ ಕಚೇರಿಗಳಿಗೆ ಈ ನಿಯಮ ಅನ್ವಯಿಸಲಿದ್ದು, ಮಾರ್ಗಸೂಚಿ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೆ ನೋಡಿಕೊಳ್ಳುವಂತೆ ಎಂದು ಶಾಖೆಗಳ ಮುಖ್ಯಸ್ಥರಿಗೆ ಆದೇಶದಲ್ಲಿ ಸೂಚಿಸಲಾಗಿದೆ.

ಇದು ಸಮತೋಲಿತ ಆದೇಶ. ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ಯಾವಾಗಲೂ ಔಪಚಾರಿಕ ಉಡುಗೆ ಧರಿಸಲು ಪ್ರಾರಂಭಿಸಬೇಕು. ವರ್ಷಗಳಿಂದ ಅನೇಕ ಮಂದಿ ಜೀನ್ಸ್ ಮತ್ತು ಟೀ ಶರ್ಟ್‌ ಸೇರಿದಂತೆ ಸಾಮಾನ್ಯ ಉಡುಗೆಗಳನ್ನು ಧರಿಸಲು ಪ್ರಾರಂಭಿಸಿದರು. ಯಾರೂ ಅದನ್ನು ಪ್ರಶ್ನಿಸಿಲ್ಲ, ಕಚೇರಿಗೆ ಆ ರೀತಿ ಬರದಂತೆ ಹೇಳಿಲ್ಲ ಎಂದು ಹೇಳಿದ್ದಾರೆ.

ಜೈಸ್ವಾಲ್ ಕಳೆದ ವಾರ ಸಿಬಿಐನ 33 ನೇ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದು ಸಿಬಿಐನ ದಕ್ಷತೆ ಸುಧಾರಿಸಲು ಇನ್ನಷ್ಟು ಪ್ರಮುಖ ಆಡಳಿತಾತ್ಮಕ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ.