Sunday, 24th November 2024

ಗುಲಾಂ ನಬಿ ಅಜಾದ್ ಪಕ್ಷದ ಮೊದಲ ಘಟಕ ಸ್ಥಾಪನೆ ಇಂದು

ಶ್ರೀನಗರ: ಕಾಂಗ್ರೆಸ್ ಪಕ್ಷದಿಂದ ಹೊರಗೆ ಕಾಲಿಟ್ಟಿರುವ ಹಿರಿಯ ನಾಯಕ ಗುಲಾಂ ನಬಿ ಅಜಾದ್ ಅವರು ಇದೀಗ ಹೊಸ ರಾಜಕೀಯ ಅಧ್ಯಾಯ ಬರೆಯಲು ಮುಂದಾಗಿದ್ದಾರೆ. ತಮ್ಮದೇ ಹೊಸ ಪಕ್ಷವೊಂದನ್ನು ರಚಿಸಲು ಹೊರಟಿರುವ ಅವರು ಜಮ್ಮು ಕಾಶ್ಮೀರದಲ್ಲಿ ಭಾನುವಾರ ಮೊದಲ ಘಟಕ ಸ್ಥಾಪಿಸಲಿದ್ದಾರೆ.

73 ವರ್ಷದ ಅಜಾದ್ ಅವರು ಜಮ್ಮುವಿಗೆ ಬರಲಿದ್ದಾರೆ. ವಿಮಾನ ನಿಲ್ದಾಣದಿಂದ ಬೆಂಬಲಿಗರೊಂದಿಗೆ ಅವರು ಸೈನಿಕ್ ಫಾರ್ಮ್ಸ್ ಗೆ ತೆರಳಲಿದ್ದಾರೆ. ಅಲ್ಲಿ 20 ಸಾವಿರ ಮಂದಿಯ ಬೆಂಬಲಿಗರ ರ್ಯಾಲಿಯಲ್ಲಿ ಭಾಷಣ ಮಾಡಲಿದ್ದಾರೆ. ಇದೇ ಕಾರ್ಯಕ್ರಮ ದಲ್ಲಿ ಅವರು ತಮ್ಮ ಹೊಸ ರಾಷ್ಟ್ರೀಯ ಪಕ್ಷದ ಕುರಿತು ಮಾತನಾಡಲಿದ್ದಾರೆ.

ಕಾಂಗ್ರೆಸ್ ಪಕ್ಷದೊಂದಿಗೆ ಸುಮಾರು ಐದು ದಶಕಗಳ ನಂಟನ್ನು ಕಡಿದುಕೊಂಡಿರುವ ಆಜಾದ್, ಕಳೆದ ಆಗಸ್ಟ್ 26ರಂದು ಪಕ್ಷ ತೊರೆದಿದ್ದರು. ಅಲ್ಲದೆ ಕಾಂಗ್ರೆಸ್ ಪಕ್ಷವು ಸಮಗ್ರ ವಾಗಿ ನಾಶವಾಗಿದೆ ಎಂದಿದ್ದರು. ಪಕ್ಷದೊಳಗಿನ ಸಲಹಾ ಕಾರ್ಯವಿಧಾನವನ್ನು ರಾಹುಲ್ ಗಾಂಧಿ ನಾಶ ಮಾಡಿದ್ದಾರೆ ಎಂದು ಆಜಾದ್ ದೂರಿದ್ದರು.

ಇದೇ ವೇಳೆ ಜಮ್ಮು ಕಾಶ್ಮೀರದಲ್ಲಿ ಮಾಜಿ ಸಚಿವರು, ಶಾಸಕರು ಸೇರಿ ಡಜನ್ ಗೂ ಹೆಚ್ಚು ಪ್ರಭಾವಿ ನಾಯಕರು, ನೂರಾರು ಜಿಲ್ಲಾ- ತಾಲೂಕು ಪಂಚಾಯತ್ ಮಟ್ಟದ ಸದಸ್ಯರು, ಬ್ಲಾಕ್ ಲೆವೆಲ್ ನಾಯಕರು, ಪಾಲಿಕೆ ಕಾರ್ಪೋರೇಟರ್ ಗಳು ಕಾಂಗ್ರೆಸ್ ತೊರೆದು, ಆಜಾದ್ ಅವರ ಬೆಂಬಲಕ್ಕೆ ನಿಂತಿದ್ದಾರೆ.