Sunday, 15th December 2024

ಗುಜರಾತ್‌ನ ಮಾಜಿ ಡಿಐಜಿ ಡಿಜಿ ವಂಜಾರಾರಿಂದ ಹೊಸ ಪಕ್ಷ ಘೋಷಣೆ

ಹಮದಾಬಾದ್: ಗುಜರಾತ್ ಚುನಾವಣೆಗೆ ವಿವಿಧ ಪಕ್ಷಗಳು ಭರ್ಜರಿಯಾಗಿ ತಯಾರಿಯೊಂದಿಗೆ ಕಣಕ್ಕಿಳಿಯುತ್ತಿವೆ. ಈ ನಡುವೆ ನಿವೃತ್ತ ಐಪಿಎಸ್‌ ಅಧಿಕಾರಿ, ಗುಜರಾತ್‌ನ ಮಾಜಿ ಡಿಐಜಿ ಡಿಜಿ ವಂಜಾರಾ ಹೊಸ ಪಕ್ಷ ಘೋಷಿಸಿದ್ದಾರೆ.

ಮಾಜಿ ಎನ್‌ಕೌಂಟರ್ ಸ್ಪೆಷಲಿಸ್ಟ್ ವಂಜಾರಾ ಹಿಂದುತ್ವವಾದಿ ರಾಜಕೀಯ ಪಕ್ಷ ಘೋಷಿಸಿದ್ದಾರೆ. ಹೊಸ ಪಕ್ಷಕ್ಕೆ ಪ್ರಜಾ ವಿಜಯ್ ಪಾರ್ಟಿ(ಪಿವಿಪಿ) ಎಂದು ಹೆಸರಿಡಲಾಗಿದೆ.

ಗುಜರಾತ್ ರಾಜ್ಯದ 182 ಸದಸ್ಯ ಬಲದ ವಿಧಾನಸಭೆಗೆ ಎರಡು ಹಂತದಲ್ಲಿ ಡಿಸೆಂಬರ್ 1 ಹಾಗೂ 5 ರಂದು ಚುನಾವಣೆ ನಿಗದಿ ಯಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಪಿವಿಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ವಂಜಾರಾ ಹೇಳಿದರು.

“ಗುಜರಾತ್ ಜನತೆ ಹಿಂದುಯೇತರ ಪಕ್ಷವನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಹಿಂದುತ್ವವಾದಿ ಪಕ್ಷದಿಂದ ಮಾತ್ರ ಬಿಜೆಪಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಾಧ್ಯ. ಇಂದು ರಾಜ್ಯ ಮತ್ತು ದೇಶದ ಜನತೆಗೆ ‘ಪ್ರಜಾ ವಿಜಯ್ ಪಕ್ಷ’ ಹಿಂದುತ್ವದ ಪಕ್ಷ ಎಂದು ತಿಳಿಯಬೇಕೆಂದು ನಾನು ಬಯಸುತ್ತೇನೆ. ,” ಎಂದು ವಂಜಾರ ತಿಳಿಸಿದರು.

ಬಿಜೆಪಿ ಸೇರದೆ ಹೊಸ ಪಕ್ಷ ಸ್ಥಾಪಿಸಿದ್ದೇಕೆ? ಎಂಬ ಪ್ರಶ್ನೆಗೆ ಉತ್ತರಿಸಿ, ಟಿಕೆಟ್ ಸಿಗದೆ ನಾನು ಪಕ್ಷ ಸ್ಥಾಪಿಸುತ್ತಿಲ್ಲ, ಟಿಕೆಟ್‌ಗಾಗಿ ನಾನು ಕ್ಯೂನಲ್ಲಿ ನಿಲ್ಲುವ ಪೈಕಿಯಲ್ಲ ಎಂದಿದ್ದಾರೆ.

ಪಿವಿಪಿಯ ಪ್ರಧಾನ ಕಾರ್ಯದರ್ಶಿ ಸಮತ್ ಸಿನ್ಹಾ ಚೌಹಾಣ್ ಮಾತನಾಡಿ, ಹೊಸದಾಗಿ ಆರಂಭವಾದ ಪಕ್ಷವು ಹಿಂದುತ್ವ ಪಕ್ಷ ಎಂಬ ವಿಶಿಷ್ಟ ಗುರುತನ್ನು ಹೊಂದಿ ಹೋರಾಟಕ್ಕಿಳಿಯಲಿದೆ ಎಂದರು.

2005ರ ಸೋಹ್ರಾಬುದ್ದೀನ್‌ ಶೇಖ್‌ ಮತ್ತು ಆತನ ಪತ್ನಿ ಎನ್‌ಕೌಂಟರ್‌ ಹಾಗೂ 2006ರ ತುಳಸಿರಾಮ್ ಪ್ರಜಾಪತಿ, ಇಶ್ರಾಂತ್‌ ಜಹಾನ್‌, ಸಾದಿಕ್‌ ಜಾಮಾಲ್‌, ಮತ್ತಿತರ ಎನ್‌ಕೌಂಟರ್‌ಗೆ ಸಂಬಂಧಿಸಿ ವಂಜಾರಾ ಅವರನ್ನು ಬಂಧಿಸಲಾಗಿತ್ತು.