ಚೆನ್ನೈ: ಭಾರತೀಯ ಜನತಾ ಪಕ್ಷದೊಂದಿಗೆ ಸ್ನೇಹ ಕಳೆದುಕೊಂಡಿರುವ ಪಳನಿಸ್ವಾಮಿ ಯವರ ಎಐಎಡಿಎಂಕೆ ಪಕ್ಷವು ಮುಂದಿನ ಲೋಕಸಭಾ ಚುನಾವಣೆಗೆ ಹೊಸ ಮೈತ್ರಿ ಕೂಟ ರಚನೆ ಮಾಡಲಿದೆ.
ಬಿಜೆಪಿ ಜತೆಗಿನ ನಾಲ್ಕು ವರ್ಷಗಳ ಮೈತ್ರಿ ಮುರಿದು ಎನ್ ಡಿಎ ನಿಂದ ಹೊರ ಬಂದು ಮೂರು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ. 2024ರ ಲೋಕಸಭಾ ಚುನಾವಣೆಗೆ ಪ್ರತ್ಯೇಕ ಮೈತ್ರಿಕೂಟವನ್ನು ಮುನ್ನಡೆಸಲಿದೆ ಎಂದು ಎಐಎಡಿಎಂಕೆ ಹೇಳಿ ಕೊಂಡಿದೆ.
ಎಐಎಡಿಎಂಕೆ ಹಿರಿಯ ನಾಯಕ ಕೆಪಿ ಮುನುಸಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾ ಮಲೈ ಅವರನ್ನು ಪದಚ್ಯುತಗೊಳಿಸುವಂತೆ ಪಕ್ಷ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.
“ಎಐಎಡಿಎಂಕೆಯಂತಹ ದೊಡ್ಡ ಪಕ್ಷವು ಮತ್ತೊಂದು ಪಕ್ಷದ ರಾಜ್ಯಾಧ್ಯಕ್ಷರನ್ನು ಪದಚ್ಯುತಗೊಳಿಸಲು ಪ್ರಯತ್ನಿಸುತ್ತದೆಯೇ ಎಂದು ಕೇಳುವುದು ಸಹ ಬಾಲಿಶವಾಗಿದೆ. ನಾವು ಎಂದಿಗೂ ಅಂತಹ ತಪ್ಪನ್ನು ಮಾಡುವುದಿಲ್ಲ” ಎಂದು ಮುನುಸಾಮಿ ಹೇಳಿದರು.
ಎನ್ಡಿಎ ಸೇರುವ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಮುನುಸಾಮಿ, “ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಇದೊಂದು ನಾಟಕ ಎಂದು ಹೇಳುತ್ತಿದ್ದಾರೆ. ನಾವು ಬಿಜೆಪಿಯೊಂದಿಗೆ ಸಂಬಂಧ ಮುರಿದ ನಂತರ ಅವರು ಎದುರಿಸುತ್ತಿರುವ ಭಯದಿಂದ ಅವರು ಈ ರೀತಿ ಮಾತನಾಡುತ್ತಿದ್ದಾರೆ” ಎಂದು ಹೇಳಿದರು.