ಥಾಣೆ: ಕಣ್ಣು ಕಾಣದ ದಂಪತಿಗೆ (blind couple) ಇಬ್ಬರು ಮಕ್ಕಳ ಜವಾಬ್ದಾರಿ ಒಂದು ಕಡೆಯಾದರೆ ಇನ್ನೊಂದು ಕಡೆ ಮನೆಯಲ್ಲಿ ಬಡತನ. ಬದುಕೇ ತೂಗುಯ್ಯಾಲೆಯಲ್ಲಿರುವಾಗ ಮೂರನೇ ಮಗು (baby) ಮಹಿಳೆಯ ಗರ್ಭದಲ್ಲಿ ಬೆಳೆಯುತ್ತಿತ್ತು. ಇವರ ಕಷ್ಟ ಅರಿತ ವೈದ್ಯನೊಬ್ಬ ಮಗುವನ್ನು (Newborn Baby) ನನಗೆ ಕೊಡಿ. ಅದಕ್ಕೆ ಪ್ರತಿಯಾಗಿ ಹಣ ಕೊಡುತ್ತೇನೆ, ಜೊತೆಗೆ ಇಬ್ಬರು ಮಕ್ಕಳ ಶೈಕ್ಷಣಿಕ ವೆಚ್ಚ ಭರಿಸುವ ಆಸೆ ತೋರಿಸಿ ದಂಪತಿಗೆ ವಂಚಿಸಿ ಮಗುವನ್ನು ಮಾರಾಟ (Baby selling business) ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಅಂಧ ದಂಪತಿಯ ನವಜಾತ ಗಂಡು ಮಗುವನ್ನು 50,000 ರೂ.ಗೆ ಮಾರಾಟ ಮಾಡಿರುವ ಆರೋಪದ ಮೇಲೆ ಮಹಾರಾಷ್ಟ್ರದ ಕಲ್ಯಾಣದ ಅಂಬಿವ್ಲಿಯಲ್ಲಿರುವ ಗಣಪತಿ ನರ್ಸಿಂಗ್ ಹೋಮ್‌ನ ವೈದ್ಯ ಎ. ಧೋನಿ ವಿರುದ್ಧ ಬಾಲನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಗು ಹುಟ್ಟಿದ ಮೇಲೆ ಪೋಷಕರಿಗೆ ಮಗುವಿನ ಮುಖವನ್ನೂ ಕೂಡ ವೈದ್ಯ ತೋರಿಸಲಿಲ್ಲ. ಅಲ್ಲದೇ ಬಿಡಿಗಾಸು ನೀಡಲು ಮುಂದಾಗಿದ್ದರಿಂದ ದಂಪತಿ ಜಿಲ್ಲೆಯ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡಿದ್ದಾರೆ.
ಪಶ್ಚಿಮ ಕಲ್ಯಾಣದ ಮೊಹಾನೆಯಲ್ಲಿ ವಾಸವಾಗಿದ್ದ ಕೆರಾಬಾಯಿ ರೋಹಿತ್ ಗುರವ್ (30) ಅವರು ಈಗಾಗಲೇ ಎರಡು ಮಕ್ಕಳ ತಾಯಿಯಾಗಿದ್ದರು. ನಾಲ್ಕು ತಿಂಗಳ ಗರ್ಭಿಣಿಯಾಗಿದಾಗ ಅವರಿಗೆ ಮೂರನೇ ಬಾರಿ ಗರ್ಭಧಾರಣೆಯಾಗಿರುವುದು ತಿಳಿಯಿತು. ಮುಂಬಯಿನ ರೈಲುಗಳಲ್ಲಿ ಭಿಕ್ಷಾಟನೆಯ ಜೊತೆಗೆ ಇತರ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ಪತಿಗೆ ಕುಟುಂಬದ ಆರ್ಥಿಕ ಹೊರೆ ಹೊರುವುದು ಅಸಾಧ್ಯವಾಗಿತ್ತು. ಹೀಗಿರುವಾಗ ದಂಪತಿ ಗರ್ಭಪಾತಕ್ಕೆ ಮುಂದಾದರು. ಆದರೆ ಈಗಾಗಲೇ ಅವಧಿ ಮೀರಿದ್ದರಿಂದ ಅವರಿಗೆ ಗರ್ಭಪಾತ ಮಾಡಿಸುವುದು ಸಾಧ್ಯವಿರಲಿಲ್ಲ. ಹೀಗಾಗಿ ವೈದ್ಯ ಅನುರಾಗ್ ಧೋನಿ ದಂಪತಿಗೆ ಮಗುವಿಗೆ ಜನ್ಮ ನೀಡಿ ನನಗೆ ಕೊಡಿ. ತಮ್ಮ ದೂರದ ಸಂಬಂಧಿ ಮಗುವನ್ನು ದತ್ತು ತೆಗೆದುಕೊಳ್ಳಲು ಬಯಸಿದ್ದಾರೆ. ಅದಕ್ಕೆ ಬದಲಾಗಿ ಅವರು ಆಸ್ಪತ್ರೆಯ ವೆಚ್ಚ ಹಾಗೂ ನಿಮ್ಮ ಇಬ್ಬರು ಮಕ್ಕಳ ಶಿಕ್ಷಣ ವೆಚ್ಚ ಭರಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದರು. ದಂಪತಿ ವೈದ್ಯರ ಮಾತು ನಂಬಿದ್ದರು.
ಆಗಸ್ಟ್ 23ರಂದು ಕೆರಾಬಾಯಿ ರೋಹಿತ್ ಗುರವ್ ಅವರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಹೆರಿಗೆ ಇವತ್ತು ಆಗುವುದಿಲ್ಲ. ನಾಳೆ ಆಗಬಹುದು ಎಂದು ಹೇಳಿ ಮಹಿಳೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಕುಟುಂಬವನ್ನು ಮನೆಗೆ ಕಳುಹಿಸಿದ್ದರು. ಆದರೆ ರಾತ್ರಿ 11.30ರ ಸುಮಾರಿಗೆ ಮಹಿಳೆ ಜೊತೆ ಯಾರೂ ಇಲ್ಲದೇ ಇದ್ದಾಗ ಹೆರಿಗೆ ಮಾಡಿಸಿದ್ದರು. ಅವರಿಗೆ ಮಗುವಿನ ಮುಖವನ್ನೂ ಕೂಡ ತೋರಿಸಲಿಲ್ಲ.
ಸುಮಾರು 8ರಿಂದ 10 ದಿನಗಳ ಕಾಲ ಮಗುವನ್ನು ತೋರಿಸದೇ ಇದ್ದದ್ದು ಮಾತ್ರವಲ್ಲ ಆಸ್ಪತ್ರೆಯ ಬಿಲ್ ಕಟ್ಟುವಂತೆ ವೈದ್ಯ ಬಡ ದಂಪತಿಗೆ ಹೇಳಿದ್ದಾನೆ. ಇದರಿಂದ ಕಂಗೆಟ್ಟ ದಂಪತಿ ನಮ್ಮಿಂದ ಇದು ಸಾಧ್ಯವಿಲ್ಲ. ಮಗುವನ್ನು ನಮಗೆ ವಾಪಸ್ ನೀಡಿ ಎಂದು ಕೇಳಿದಾಗ, ʼʼಮಗು ಜನನದ ವೇಳೆ ಅತ್ತಿಲ್ಲ. ಹೀಗಾಗಿ ಪರಿಶೀಲನೆಯಲ್ಲಿ ಇಡಲಾಗಿದೆʼʼ ಎಂದಿದ್ದರು. ಬಳಿಕ ಮಗುವನ್ನು 50 ಸಾವಿರ ರೂಪಾಯಿಗಳಿಗೆ ಬೇರೆಯವರಿಗೆ ಮಾರಿದ್ದಾಗಿ ಹೇಳಿದ್ದಾರೆ. ಸಿಕ್ಕಿದ ಹಣದಲ್ಲಿ ತಮ್ಮ ಪಾಲನ್ನು ತೆಗೆದುಕೊಂಡು ದಂಪತಿಗೆ ಬಿಡಿಗಾಸು ನೀಡಲು ಬಂದಾಗ ದಂಪತಿ ನಮಗೆ ಹಣ ಬೇಡ ಮಗುವನ್ನು ಕೊಡಿ ಎಂದರೂ ವೈದ್ಯರು ಕೇಳಲಿಲ್ಲ. ಹೀಗಾಗಿ ಅಂಧ ದಂಪತಿ ಈ ಬಗ್ಗೆ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡಿದ್ದಾರೆ.
ವೈದ್ಯರು ತಮ್ಮ ಒಪ್ಪಿಗೆ ಇಲ್ಲದೆ ಮಗುವಿಗೆ ಮಹಿಳೆ ಹಾಲುಣಿಸದಂತೆ ಮಾಡಲು ತಾಯಿಗೆ ಕೆಲವು ಮಾತ್ರೆಗಳನ್ನು ನೀಡಿರುವುದಾಗಿ ತಿಳಿದು ಬಂದಿದೆ. ಸಾಮಾಜಿಕ ಕಾರ್ಯಕರ್ತರ ಮಧ್ಯಸ್ಥಿಕೆಯ ಬಳಿಕ ಮಗುವನ್ನು ದಂಪತಿಗೆ ಹಿಂತಿರುಗಿಸಲಾಗಿದೆ. ಈ ಆರೋಪವನ್ನು ನಿರಾಕರಿಸಿರುವ ವೈದ್ಯ ಡಾ. ಧೋನಿ, ಮಗು ಆಸ್ಪತ್ರೆಯಲ್ಲಿತ್ತು. ಆದರೆ ಪೋಷಕರಿಗೆ ಮಗುವನ್ನು ತೆಗೆದುಕೊಳ್ಳಲು ಇಷ್ಟವಿರಲಿಲ್ಲ. ಇದರಲ್ಲಿ ನನ್ನ ತಪ್ಪಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಗುವಿನ ವೈದ್ಯಕೀಯ ದಾಖಲೆಯನ್ನು ನೀಡದೆ ಆಸ್ಪತ್ರೆಯ ಭಾರಿ ಬಿಲ್ ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಅಂಧ ದಂಪತಿ ಆರೋಪಿಸಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ವೈದ್ಯನ ವಿರುದ್ಧ ಖಡಕಪದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Munirathna Arrest: ಬಿಜೆಪಿ ಶಾಸಕ ಮುನಿರತ್ನ ಮತ್ತೆ ಬಂಧನ, ಈ ಬಾರಿ ಅತ್ಯಾಚಾರ ಕೇಸ್!
ಅಂಧ ದಂಪತಿಯ ದೂರನ್ನು ದಾಖಲಿಸಲಾಗಿದೆ. ವೈದ್ಯ ಧೋನಿ ವಿರುದ್ಧ ಸೆಕ್ಷನ್ 81 ಮತ್ತು 82 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ತನಿಖೆ ಮುಂದುವರಿಸಿರುವುದಾಗಿ ಖಡಕಪದ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅಮರನಾಥ್ ವಾಘ್ಮೋಡೆ ತಿಳಿಸಿದ್ದಾರೆ.