ನವದೆಹಲಿ: ಚೀನಾ ಕಂಪನಿಗಳಿಂದ ಅಕ್ರಮವಾಗಿ ಹಣ ಪಡೆದ ಪ್ರಕರಣಕ್ಕೆ ಸಂಬಂಧಿಸಿ ನ್ಯೂಸ್ಕ್ಲಿಕ್ ಡಿಜಿಟಲ್ ಮಾಧ್ಯಮಕ್ಕೆ ಸಂಬಂಧಿಸಿದಂತೆ ವಿವಿಧ ಸ್ಥಳಗಳಲ್ಲಿ ದೆಹಲಿ ಪೊಲೀಸರು ದಾಳಿ ನಡೆಸಿದ್ದಾರೆ.
ನ್ಯೂಸ್‌ಕ್ಲಿಕ್‌ನ ಕೆಲವು ಪತ್ರಕರ್ತರ ಮನೆ ಮೇಲೆ ದಾಳಿ ನಡೆಸಲಾಗಿದೆ. ಆದರೇ ಯಾವುದೇ ಬಂಧನವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದಾಳಿ ವೇಳೆ ಪತ್ರಕರ್ತರ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ಗಳನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿ ದ್ದಾರೆ. ನ್ಯೂಸ್ಕ್ಲಿಕ್ ಸುದ್ಧಿ ಪೊರ್ಟಲ್ ಚೀನಾದಿಂದ ಹಣ ಪಡೆಯುತ್ತಿದೆ ಎಂಬ ಆರೋಪದ ಮೇರೆಗೆ ದೆಹಲಿ ಪೊಲೀಸರು ಹೊಸ ಪ್ರಕರಣ ದಾಖಲಿಸಿಕೊಂಡು ಮತ್ತೆ ತನಿಖೆ ಆರಂಭಿಸಿದ್ದಾರೆ.
2021 ರಲ್ಲಿ, ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗವು ನ್ಯೂಸ್ಕ್ಲಿಕ್ ಪಡೆದ ಅಕ್ರಮ ಹಣದ ಬಗ್ಗೆ ಮೊಟ್ಟ ಮೊದಲ ಬಾರಿಗೆ ಪ್ರಕರಣ ದಾಖಲಿಸಿ ಕೊಂಡಿತ್ತು. ಚೀನಾ ಕಂಪನಿಗಳ ಮೂಲಕ ಅಕ್ರಮವಾಗಿ ಮಾಧ್ಯಮ ಸಂಸ್ಥೆ ಹಣ ಪಡೆದುಕೊಂಡಿದೆ ಎಂದು ಎಫ್ಐಆರ್ನಲ್ಲಿ ದಾಖಲಿಸಲಾಗಿತ್ತು.
ಆಗಸ್ಟ್ 22 ರಂದು ನ್ಯೂಸ್‌ಕ್ಲಿಕ್‌ನ ಮುಖ್ಯ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರು, ದೆಹಲಿ ಪೋಲೀಸ್ನ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯು) ಸುದ್ದಿ ಮಾಧ್ಯಮ ಸಂಸ್ಥೆ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ತೆಗೆದುಕೊಳ್ಳದಂತೆ ಆದೇಶ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲು ಏರಿದ್ದರು.