Saturday, 23rd November 2024

ಚೀನಾ ಪರ ವರದಿ: ಉದ್ಯಮಿಯಿಂದ ನ್ಯೂಸ್‌ಕ್ಲಿಕ್‌ ಬಾಚಿದ್ದು 28 ಕೋಟಿ ರೂ…!

ನವದೆಹಲಿ: ನ್ಯೂಸ್‌ಕ್ಲಿಕ್‌ ಸಂಸ್ಥಾಪಕ ಪ್ರಬೀರ್‌ ಪುರಕಾಯಸ್ಥ ಹಾಗೂ ಸಂಸ್ಥೆಯ ಎಚ್‌ಆರ್‌ ವಿಭಾಗದ ಮುಖ್ಯಸ್ಥ ರೊಬ್ಬರನ್ನು ಬಂಧಿಸಿದ ಬೆನ್ನಲ್ಲೇ, “ಚೀನಾ ಪರ ವರದಿ ಪ್ರಕಟಿಸಲು ಅಮೆರಿಕ ಉದ್ಯಮಿಯಿಂದ ನ್ಯೂಸ್‌ಕ್ಲಿಕ್‌ ವೆಬ್‌ಸೈಟ್‌ 28 ಕೋಟಿ ರೂ. ಪಡೆದಿದೆ” ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಚೀನಾ ಪರವಾಗಿ ಕಾರ್ಯನಿರ್ವಹಿಸುತ್ತಿರುವ, ಚೀನಾ ನಡೆಗಳ ಪರ ಪ್ರಚಾರ ನಡೆಸುವ ಅಮೆರಿಕ ಉದ್ಯಮಿ ನೆವಿಲ್ಲೆ ರಾಯ್‌ ಸಿಂಘಂ ಅವರಿಗೆ ಸಂಬಂಧಿ ಸಿದ ಹಲವು ಕಂಪನಿಗಳಿಂದ 2018ರಿಂದ 2021ರ ಅವಧಿಯಲ್ಲಿ 28.29 ಕೋಟಿ ರೂ. ಪಡೆದಿರುವುದಕ್ಕೆ ದೆಹಲಿ ಪೊಲೀಸ್‌ ಇಲಾಖೆಯ ಸ್ಪೆಷಲ್‌ ಸೆಲ್‌ಗೆ ಸಾಕ್ಷ್ಯಗಳು ದೊರೆತಿವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ‌

ನ್ಯೂಸ್‌ಕ್ಲಿಕ್‌ ಪಡೆದುಕೊಂಡಿರುವ 28.29 ಕೋಟಿ ರೂಪಾಯಿಯಲ್ಲಿ ಅಮೆರಿಕದ ಜಸ್ಟಿಸ್‌ ಆಯಂಡ್‌ ಎಜುಕೇಷನ್‌ ಫಂಡ್‌ ಸಂಸ್ಥೆಯಿಂದ 27.51 ಕೋಟಿ ರೂ., ಜಿಎಸ್‌ಪಿಎಎನ್‌ ಎಲ್‌ಎಲ್‌ಸಿ ಕಂಪನಿಯಿಂದ 26.98 ಲಕ್ಷ ರೂ., ಟ್ರೈಕಾಂಟಿನೆಂಟಲ್‌ ಲಿಮಿಟೆಡ್‌ ಐಎನ್‌ಸಿಯಿಂದ 49.31 ಲಕ್ಷ ರೂ. ಹಾಗೂ ಬ್ರೆಜಿಲ್‌ ಮೂಲದ ಸೆಂಟ್ರೋ ಪಾಪ್ಯುಲರ್‌ ಡೆ ಮಿಡಾಸ್‌ ಕಂಪನಿಯಿಂದ 2.03 ಲಕ್ಷ ರೂ. ಪಡೆದಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ನ್ಯೂಸ್‌ಕ್ಲಿಕ್‌ ಸಂಸ್ಥೆಯಲ್ಲಿ ಚೀನಾ ಹೂಡಿಕೆ ಮಾಡಿದೆ. ಅಕ್ರಮವಾಗಿ ಹಣ ವರ್ಗಾವಣೆ ಹಾಗೂ ಚೀನಾ ಪರವಾಗಿ ಸುದ್ದಿಗಳನ್ನು ಪ್ರಕಟಿಸಿದ ಆರೋಪದ ಹಿನ್ನೆಲೆಯಲ್ಲಿ ಇ.ಡಿ ತನಿಖೆ ನಡೆಸುತ್ತಿದೆ.