ನವದೆಹಲಿ: ನ್ಯೂಸ್‌ಕ್ಲಿಕ್ ನ್ಯೂಸ್ ಪೋರ್ಟಲ್ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಶನಿವಾರ ಸಾವಿರ ಪುಟಗಳ ಮೊದಲ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಸುದ್ದಿತಾಣವು ಚೀನಾ ಪರ ಪ್ರಚಾರಾಂದೋಲನ ನಡೆಸಲು ಹಣ ಪಡೆದಿದೆ ಎಂಬ ಆರೋಪದ ಅಡಿಯಲ್ಲಿ ಅದರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ದೆಹಲಿ ಪೊಲೀಸರ ವಿಶೇಷ ಕೋಶವು ಕಳೆದ ವರ್ಷ ಯುಎಪಿಎಯ ವಿವಿಧ ಸೆಕ್ಷನ್ ಹಾಗೂ ಭಾರತೀಯ ದಂಡ ಸಂಹಿತೆಯ 120B ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು.
ನ್ಯೂಸ್‌ಕ್ಲಿಕ್ ಚೀನಾದಿಂದ ದೊಡ್ಡ ಮೊತ್ತದ ಹಣವನ್ನು ಸ್ವೀಕರಿಸಿದೆ ಎಂದು ತನಿಖಾ ಸಂಸ್ಥೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ. ಇದು ಭಾರತದ ಸಾರ್ವಭೌಮತೆಗೆ ಧಕ್ಕೆ ತರಲು ಮತ್ತು ಅದರ ನಾಗರಿಕರ ನಡುವೆ ವೈಷಮ್ಯವನ್ನು ಬಿತ್ತಲು ಉದ್ದೇಶಿಸಿದೆ. 2019ರ ಲೋಕಸಭಾ ಚುನಾವಣೆಯನ್ನು ಹಾಳು ಮಾಡಲು ಪೋರ್ಟಲ್‌ನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರು ಪೀಪಲ್ಸ್ ಅಲೈಯನ್ಸ್ ಫಾರ್ ಡೆಮಾಕ್ರಸಿ ಅಂಡ್ ಸೆಕ್ಯುಲರಿಸಂ (PADS) ಜತೆ ಸಂಚು ರೂಪಿಸಿದ್ದಾರೆ ಎಂದು ಅದು ಆರೋಪಿಸಿದೆ.
ಪ್ರಕರಣ ಸಂಬಂಧ ನ್ಯೂಸ್‌ಕ್ಲಿಕ್‌ನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು 2023ರ ಅಕ್ಟೋಬರ್ 3ರಂದು ಬಂಧಿಸಲಾಗಿತ್ತು.