ಶ್ರೀನಗರ: ಶ್ರೀನಗರದಲ್ಲಿ ನಡೆಯಲಿರುವ ಜಿ 20 ಸಭೆಗೂ ಮುನ್ನವೇ ರಾಷ್ಟ್ರೀಯ ತನಿಖಾ ಸಂಸ್ಥೆ ಜಮ್ಮು ಮತ್ತು ಕಾಶ್ಮೀರದ ಹಲವು ಜಿಲ್ಲೆಗಳಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಸಹಕಾರ ನೀಡುತ್ತಿರುವ ಶಂಕಿತ ಸಹಚರರು ಮತ್ತು ಓವರ್‌ಗ್ರೌಂಡ್ ಕಾರ್ಮಿಕರ ಮೇಲೆ ದಾಳಿ ನಡೆಸಿದೆ.
ಕಾಶ್ಮೀರ ವಿಭಾಗದ ಶ್ರೀನಗರ, ಪುಲ್ವಾಮಾ, ಕುಪ್ವಾರ, ಅವಂತಿಪೋರಾ ಮತ್ತು ಅನಂತ ನಾಗ್‌ನ 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಮತ್ತು ಜಮ್ಮು ವಿಭಾಗದ ಹಲವಾರು ಸ್ಥಳಗಳಲ್ಲಿ ಶೋಧ ತೀವ್ರಗೊಳಿಸಲಾಗಿದೆ.
ಎನ್‌ಐಎ ಅಧಿಕಾರಿಗಳು ದಕ್ಷಿಣ ಕಾಶ್ಮೀರದ ಗೂಸು, ನೆಹ್ಮಾ ಮತ್ತು ದಫರ್‌ಪುರ ಪ್ರದೇಶ ಗಳಲ್ಲಿ ಸಹ ದಾಳಿ ನಡೆಸಿದ್ದಾರೆ.
ಪುಲ್ವಾಮಾ ಜಿಲ್ಲೆಯಲ್ಲಿ ಎನ್‌ಐಎ ದಾಳಿ ಪ್ರಾರಂಭಿಸಿದಾಗ ಭದ್ರತಾ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯ ಪೊಲೀಸರು ಮತ್ತು ಸಿಆರ್‌ಪಿಎಫ್ ಪಡೆಯನ್ನು ನಿಯೋಜಿಸಲಾಗಿತ್ತು. ಕಳೆದ ಕೆಲ ದಿನಗಳ ಹಿಂದಷ್ಟೇ ರಾಷ್ಟ್ರೀಯ ತನಿಖಾ ಸಂಸ್ಥೆಯು ಭಯೋತ್ಪಾದಕರಿಗೆ ಆರ್ಥಿಕ ಸಹಾಯ ನೀಡುವ ಕೇಸ್ಗೆ ಸಂಬಂಧಿಸಿದಂತೆ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿತ್ತು.
ಮೇ 22 ರಿಂದ 24 ರವರೆಗೆ ಶ್ರೀನಗರದಲ್ಲಿ ಜಿ 20 ಪ್ರವಾಸೋದ್ಯಮದ ವರ್ಕಿಂಗ್ ಗ್ರೂಪ್ ಸಭೆ ಕರೆಯಲಾಗಿದೆ. ಜಿ20 ಸಭೆಗೂ ಮುಂಚಿತವಾಗಿ ಎನ್‌ಐಎ ತನ್ನ ದಾಳಿಗಳನ್ನು ತೀವ್ರಗೊಳಿಸಿದ್ದು, ಕಳೆದ ಮೂರು ವಾರಗಳಲ್ಲಿ ತನಿಖಾ ತಂಡವು ಭಯೋತ್ಪಾದ ನೆಗೆ ಸಂಬಂಧಿಸಿದವರನ್ನು ನಿಯಂತ್ರಿಸಲು ಜಮ್ಮು ಮತ್ತು ಕಾಶ್ಮೀರದ ವಿವಿಧ ಭಾಗಗಳ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ.