Monday, 25th November 2024

ನೀರವ್ ಮೋದಿಯ ಅಮೂಲ್ಯ ವಸ್ತುಗಳ ಹರಾಜು ಮಾರ್ಚ್ 25ರಂದು

ನವದೆಹಲಿ: ವಜ್ರೋದ್ಯಮಿ ನೀರವ್ ಮೋದಿ ನೀರವ್ ಮೋದಿ ಮಾಲಿಕತ್ವದ ಫಯರ್ ಸ್ಟಾರ್ ಡೈಮಂಡ್ ಇಂಟರ್​ನ್ಯಾಷನಲ್ ಸಂಸ್ಥೆಗೆ ಸೇರಿದ ಚಿನ್ನ, ವಜ್ರ, ಪ್ಲಾಟಿನಂ ಹಾಗು ಇತರೆ ಆಭರಣಗಳನ್ನು ಮುಂದಿನ ತಿಂಗಳು, ಅಂದರೆ 2023 ಮಾರ್ಚ್ 25ರಂದು ಹರಾಜಿ ಹಾಕಲಾಗುತ್ತಿದೆ. ಈ ಬಗ್ಗೆ ನೋಟೀಸ್ ಕೂಡ ಹೊರಡಿಸಲಾಗಿದೆ.

ವಜ್ರ, ಚಿನ್ನ ಮತ್ತು ಪ್ಲಾಟಿನಂ ಆಭರಣಗಳನ್ನು ಮಾರ್ಚ್ 25ರಂದು ಇ–ಹರಾಜು ಮೂಲಕ ಮಾರಾಟ ಮಾಡಲಾ ಗುತ್ತದೆ.

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT)ಯ ಮುಂಬೈ ವಿಭಾಗೀಯ ನ್ಯಾಯಪೀಠವು 2020 ಫೆಬ್ರುವರಿ ತಿಂಗಳಲ್ಲಿ ಸಾಂತನು ಟಿ ರೇ ಅವರನ್ನು ಫಯರ್​ಸ್ಟಾರ್ ಡೈಮಂಡ್ ಇಂಟರ್​ನ್ಯಾಷನಲ್ ಸಂಸ್ಥೆಯ ಲಿಕ್ವಿಡೇಟರ್ ಆಗಿ ನೇಮಕ ಮಾಡಿತ್ತು. ಶಾಂತನು ರೇ ಅವರ ಉಸ್ತುವಾರಿಯಲ್ಲೇ ಮುಂದಿನ ತಿಂಗಳು ಇ ಹರಾಜು ನಡೆಯಲಿದೆ.

ನೀರವ್ ಮೋದಿ ಮಾಲಕತ್ವದ ಈ ಕಂಪನಿಯಲ್ಲಿರುವ ಚಿನ್ನ, ಬೆಳ್ಳಿ, ವಜ್ರ ಇತ್ಯಾದಿ ಅಮೂಲ್ಯ ವಸ್ತುಗಳ ಬೆಲೆ ಎಷ್ಟೆಂದು ತಿಳಿಯಲು ಜೆಮ್ಮಾಲಾಜಿಕಲ್ ಇನ್ಸ್​ಟಿಟ್ಯೂಟ್​ಗೆ ಜವಾಬ್ದಾರಿ ಕೊಡಲಾಗಿದೆ. ಈ ವಸ್ತುಗಳ ಈಗಿನ ಮೌಲ್ಯ ಎಷ್ಟೆಂದು ತೀರ್ಮಾನವಾದ ಬಳಿಕ ಮೂಲ ಬೆಲೆಯನ್ನು ನಿರ್ಧರಿಸುವ ಸಾಧ್ಯತೆ ಇದೆ.

ಭಾರತದ ಅತಿದೊಡ್ಡ ಬ್ಯಾಂಕ್ ಅಪರಾಧ ಪ್ರಕರಣಗಳಲ್ಲಿ ನೀರವ್ ಮೋದಿಯದ್ದೂ ಒಂದು. ವಜ್ರೋದ್ಯಮಿಯಾದ ನೀರವ್ ಮೋದಿ ಮತ್ತವರ ಸಂಬಂಧಿ ಮೆಹುಲ್ ಚೋಕ್ಸಿ ಇಬ್ಬರೂ ಸೇರಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್​ನಿಂದ 14 ಸಾವಿರ ಕೋಟಿ ರೂ ಸಾಲ ಪಡೆದಿದ್ದರು.