Sunday, 15th December 2024

ನಿರ್ಭಯಾ ಹಂತಕರು ದೇಶದ ತಾಳ್ಮೆ ಪರೀಕ್ಷಿಸುತ್ತಿದ್ದಾರೆ: ಕೇಂದ್ರ

ನಿರ್ಭಯಾ ಹಂತಕರ ಪ್ರಕರಣವು ದೇಶದ ತಾಳ್ಮೆಯನ್ನೇ ಪರೀಕ್ಷೆ ಮಾಡುತ್ತಿದೆ ಎಂದು ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದ್ದು, ಅತ್ಯಾಚಾರಿಗಳ ಮರಣದಂಡವನ್ನು ಮುಂದೂಡುವ ಕೋರ್ಟ್‌ನ ಆದೇಶಕ್ಕೆ ಸ್ಟೇ ತರಲು ಕೋರಿದೆ.

ಹೈದರಾಬಾದ್‌ ಪಶುವೈದ್ಯೆಯ ಅತ್ಯಾಚಾರಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆಗೈದ ಉದಾಹರಣೆಯನ್ನು ಮುಂದಿಟ್ಟ ಸಾಲಿಸಿಟರ್‌ ಜನರಲ್ ತುಶಾರ್‌ ಮೆಹ್ತಾ, “ಕ್ರಮಿನಲ್ ಪ್ರಕರಣದಲ್ಲಿ ನ್ಯಾಯ ಸಿಗುವ ವಿಚಾರವಾಗಿ ಜನರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ಮೇಲ್ಕಂಡ ನಿದರ್ಶನಗಳು ತೋರುತ್ತಿವೆ,” ಎಂದಿದ್ದಾರೆ.

ಅತ್ಯಾಚಾರಿಗಳು & ಕೊಲೆಗಡುಕರಾದ ಮುಖೇಶ್ ಸಿಂಗ್, ವಿನಯ್ ಶರ್ಮಾ, ಅಕ್ಷಯ್‌ ಠಾಕೂರ್‌ ಹಾಗೂ ಪವನ್ ಗುಪ್ತಾರನ್ನು ಶೀಘ್ರೇ ಗಲ್ಲಿಗೇರಿಸಬೇಕೆಂದು ಕೋರಿದ್ದ ಕೇಂದ್ರ ಸರ್ಕಾರ, ಈ ಕುರಿತು ದೆಹಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಶಿಕ್ಷೆಯನ್ನು ಸಾಧ್ಯವಾದಷ್ಟು ದಿನ ಮುಂದೂಡಲು ದುಷ್ಕರ್ಮಿಗಳು ಉದ್ದೇಶಪೂರಿತವಾಗಿ ತಡ ಮಾಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ ಎಂದು ಕೇಂದ್ರ ಆಪಾದಿಸಿದೆ.

ಡಿಸೆಂಬರ್‌ 16, 2012ರ ಆ ಕರಾಳ ರಾತ್ರಿಯಂದು ಸಂತ್ರಸ್ತೆ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಅಮಾನುಷವಾಗಿ ಹಲ್ಲೆಗೈದು, ರಸ್ತೆಗೆಸೆದು ಸಾಯಲಿ ಎಂದು ಬಿಟ್ಟಿದ್ದ ಹಂತಕರ ಕ್ರೂರ ಮನಸ್ಥಿತಿಯನ್ನು ವಿವರಿಸಿದ ಮೆಹ್ತಾ, ’’ಪಕ್ಕಾ ಲೆಕ್ಕಾಚಾರ ಹಾಕಿ, ಮಿಕ್ಕ ದುಷ್ಕರ್ಮಿಗಳ ಜೊತೆಗೆ ಅಪರಾಧವೆಸಗಿರುವ ಯಾರೇ ಆದರೂ, ನ್ಯಾಯಾಂಗ ಪ್ರಕ್ರಿಯೆಗಳ ತಾಳ್ಮೆಯನ್ನೇ ಪರೀಕ್ಷಿಸುವಂತಾಗಿದೆ. ಏಳು ವರ್ಷಗಳು ಕಳೆದರೂ ಸಹ ಆರೋಪಿಗಳು ನ್ಯಾಯಾಂಗ ವ್ಯವಸ್ಥೆಯೊಂದಿಗೆ ಆಟವಾಡುತ್ತಾ ಸಾಗಿದ್ದಾರೆ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.