ಮುಂಬೈ: ಬ್ಯಾಂಕ್ಗಳ ಸಾಲದ ಬಡ್ಡಿ ದರ (Interest rate) ಇಳಿಸುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಒಲವು ವ್ಯಕ್ತಪಡಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank of India) ನೂರನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬ್ಯಾಂಕುಗಳು ನೀಡುವ ಸಾಲ (Bank loan) ಮತ್ತು ಅದರ ಹೆಚ್ಚಿನ ಬಡ್ಡಿ ದರದಿಂದ ಗ್ರಾಹಕರು ಒತ್ತಡ ಅನುಭವಿಸುವಂತೆ ಆಗಬಾರದು. ಸಾಲವು ಸಾಮಾನ್ಯ ಜನರ ಮತ್ತು ಉದ್ಯಮಿಗಳ ಕೈಗೆಟಕುವಂತಿರಬೇಕು. ಬಡ್ಡಿ ದರ ಇಳಿಸುವುದರಿಂದ ಕೈಗಾರಿಕೋದ್ಯಮ ಬೆಳೆದು ‘ವಿಕಸಿತ ಭಾರತ’ದ ಕನಸು ನನಸಾಗುತ್ತದೆ’ ಎಂದು ಹೇಳಿದರು.
ಇತ್ತೀಚೆಗೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಕೂಡ ಬಡ್ಡಿ ದರ ಇಳಿಸುವಂತೆ ಆರ್ಬಿಐಗೆ ಸಲಹೆ ನೀಡಿದ್ದರು. ಅಲ್ಲದೆ ಹಣದುಬ್ಬರ ಸೂಚ್ಯಂಕ ನಿರ್ಧರಿಸಲು ಆಹಾರ ಪದಾರ್ಥಗಳ ಬೆಲೆ ಪರಿಗಣಿಸಬಾರದು. ಆರ್ಬಿಐ ರೆಪೋ ರೇಟ್ ಆಧರಿಸಿ ಬ್ಯಾಂಕುಗಳು ತಮ್ಮ ಬಡ್ಡಿ ದರ ಪ್ರಕಟಿಸಬೇಕಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು.
ಇದನ್ನು ತಮ್ಮ ಭಾಷಣದಲ್ಲಿ ಪರೋಕ್ಷವಾಗಿ ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್, ನಿರ್ದಿಷ್ಟ ಕಾಲಮಿತಿಯಲ್ಲಿ ಹಾಳಾಗುವ ಮೂರ್ನಾಲ್ಕು ಸರಕುಗಳಿಂದಾಗಿ (ಪೆರಿಷೆಬಲ್ ಗೂಡ್ಸ್) ಇತ್ತೀಚೆಗೆ ಮಾಧ್ಯಮಗಳು ‘ಹಣದುಬ್ಬರ ಏರಿಕೆ’ ಎಂಬ ಪದಗಳನ್ನು ಪ್ರಮುಖವಾಗಿ ಬಿಂಬಿಸುವಂತಾಗಿದೆ. ಉಳಿದಂತೆ, ಮುಖ್ಯ ಸರಕುಗಳ ಬೆಲೆಗಳು ನಿರ್ವಹಿಸಬಹುದಾದ ಹಂತದಲ್ಲಿಯೇ ಇವೆ. ಹಣದುಬ್ಬರ ಸೂಚ್ಯಂಕ ನಿರ್ಧರಿಸಲು ಆಹಾರ ಪದಾರ್ಥಗಳ ಬೆಲೆಯನ್ನು ಪರಿಗಣಿಸಬೇಕೇ ಬೇಡವೇ ಎಂಬುದರ ಬಗ್ಗೆ ರ್ಚಚಿಸಲು ನಾನು ಬಯಸುವುದಿಲ್ಲ. ಆರ್ಬಿಐನ ದರ ಆಧರಿಸಿಯೇ ಉಳಿದ ಬ್ಯಾಂಕ್ಗಳು ತಮ್ಮ ಬಡ್ಡಿ ದರ ನಿರ್ಧರಿಸಬೇಕೇ ಎಂಬ ಬಗ್ಗೆಯೂ ನಾನು ಏನನ್ನೂ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹಣದುಬ್ಬರ ಸಂಕೀರ್ಣ ವಿಷಯ. ಸಾಮಾನ್ಯ ಜನರ ಮೇಲೆ ಅದು ನೇರ ಪರಿಣಾಮ ಉಂಟು ಮಾಡುತ್ತದೆ. ಖಾದ್ಯ ತೈಲ, ಧಾನ್ಯಗಳು ಮುಂತಾದವುಗಳ ಪೂರೈಕೆ ಹೆಚ್ಚಿಸುವುದರೊಂದಿಗೆ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಎಲ್ಲ ಪ್ರಯತ್ನ ಮಾಡುತ್ತಿದೆ. ಪೂರೈಕೆ ಅಭಾವ ಭಾರತದಲ್ಲಿ ಆಗಾಗ ಮರುಕಳಿಸುತ್ತಲೇ ಇರುತ್ತದೆ. ದರ ಏರಿಳಿತ ಕಡಿಮೆ ಮಾಡಲು ದಾಸ್ತಾನು ಸೌಲಭ್ಯ ಹೆಚ್ಚಿಸುವತ್ತ ಸರ್ಕಾರ ಗಮನ ಹರಿಸಿದೆ ಎಂದು ವಿವರಿಸಿದರು. ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ ನೀಡುತ್ತಿರುವ ಸಾಲದ ಪ್ರಮಾಣವನ್ನು ಈ ವರ್ಷ 5.75 ಲಕ್ಷ ಕೋಟಿ ರೂ., 2026ರಲ್ಲಿ 6.12 ಲಕ್ಷ ಕೋಟಿ ರೂ. ಮತ್ತು 2027ರಲ್ಲಿ 7 ಲಕ್ಷ ಕೋಟಿ ರೂ.ಗೆ ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಎಸ್ಬಿಐ 500 ಹೊಸ ಶಾಖೆ
ಸರ್ಕಾರಿ ಸ್ವಾಮ್ಯದ ಎಸ್ಬಿಐ ಇನ್ನೂ 500 ಶಾಖೆಗಳನ್ನು ತೆರೆಯಲಿದ್ದು, 2025ರ ಆರ್ಥಿಕ ವರ್ಷದ ಅಂತ್ಯಕ್ಕೆ ಶಾಖೆಗಳ ಸಂಖ್ಯೆ 23,000ಕ್ಕೆ ಏರಲಿದೆ. 1921ರಲ್ಲಿ 250ರಷ್ಟಿದ್ದ ಶಾಖೆಗಳ ಸಂಖ್ಯೆ ಈಗ 22,500ಕ್ಕೆ ಏರಿದೆ. ಇದು ಜಾಗತಿಕ ದಾಖಲೆ. ಭಾರತದಲ್ಲಿ ಆದಾಯ ತಾರತಮ್ಯ ಹೆಚ್ಚು ಎಂಬ ಟೀಕೆ ಮಾಡುವವರು ಇದನ್ನು ಗಮನಿಸಬೇಕು ಎಂದರು. 50 ಕೋಟಿ ಗ್ರಾಹಕರನ್ನು ಈ ಬ್ಯಾಂಕ್ ಹೊಂದಿದೆ. ಪ್ರತಿದಿನ 20 ಕೋಟಿ ಯುಪಿಐ (ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್) ವಹಿವಾಟುಗಳನ್ನು ನಿರ್ವಹಿಸುತ್ತಿದೆ. ಶತಮಾನ ಪೂರೈಸಿದ 43 ಶಾಖೆಗಳು ಇವೆ. ಒಟ್ಟಾರೆ ಠೇವಣಿಗಳ ಪೈಕಿ ಶೇ. 22.4ರಷ್ಟು ಪಾಲು ಎಸ್ಬಿಐನಲ್ಲಿದೆ ಎಂದರು. ನೂರನೇ ವರ್ಷಾಚರಣೆ ಸ್ಮರಣಾರ್ಥ ನೂರು ರೂ. ಮುಖಬೆಲೆಯ ನಾಣ್ಯವನ್ನು ಸಚಿವೆ ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಿದರು.
ಇದನ್ನೂ ಓದಿ: CM Siddaramaiah: ಮೋದಿ ಅವಧಿಯಲ್ಲಿ ದೇಶದ ಸಾಲ 182 ಲಕ್ಷ ಕೋಟಿಗೆ ತಲುಪಿದೆ: ಸಿಎಂ ಸಿದ್ದರಾಮಯ್ಯ ಕಿಡಿ