Friday, 22nd November 2024

Nitin Gadkari: 4ನೇ ಬಾರಿ ನಾವು ಅಧಿಕಾರಕ್ಕೆ ಬರುವ ಖಾತರಿ ಇಲ್ಲ; ನಿತಿನ್‌ ಗಡ್ಕರಿ ಹೀಗೆ ಹೇಳಿದ್ದೇಕೆ?

Nitin Gadkari

ಮುಂಬೈ: ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ (NDA) ಸರ್ಕಾರ ಸತತ 3ನೇ ಬಾರಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆಗೆ ಏರಿದೆ. 2029ರಲ್ಲಿಯೂ ಸರ್ಕಾರ ರಚಿಸುವುದಾಗಿ ಬಿಜೆಪಿ ಹಿರಿಯ ನಾಯಕ ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಕೇಂದ್ರ ಸಾರಿಗೆ ಸಚಿವ, ಬಿಜೆಪಿ ನಾಯಕ ನಿತಿನ್‌ ಗಡ್ಕರಿ (Nitin Gadkari) ಅವರು ನಮ್ಮ ಸರ್ಕಾರ 4ನೇ ಬಾರಿ ಅಧಿಕಾರಕ್ಕೆ ಬರುತ್ತದೆ ಎನ್ನುವ ವಿಚಾರದಲ್ಲಿ ಖಚಿತತೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅವರು ಯಾಕೆ ಈ ರೀತಿ ಹೇಳಿದ್ದಾರೆ? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಭಾನುವಾರ ಮಹಾರಾಷ್ಟ್ರದ ನಾಗ್ಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿಅವರು, ವಿವಿಧ ಸರ್ಕಾರಗಳಲ್ಲಿ ಸಚಿವರಾಗುತ್ತಿರುವ ತಮ್ಮ ಸಹೋದ್ಯೋಗಿ ರಾಮದಾಸ್ ಅಠಾವಳೆ (Ramdas Athawale) ಅವರ ಸಾಮರ್ಥ್ಯದ ಕುರಿತು ತಮಾಷೆ ಮಾಡುತ್ತ ಈ ರೀತಿಯ ಹೇಳಿಕೆ ನೀಡಿದ್ದಾರೆ.

“ನಮ್ಮ ಸರ್ಕಾರ ನಾಲ್ಕನೆಯ ಬಾರಿ ಅಧಿಕಾರಕ್ಕೆ ಮರಳುವ ಕುರಿತು ಖಾತರಿ ಇಲ್ಲ. ಅದಾಗ್ಯೂ ರಾಮದಾಸ್ ಅಠಾವಳೆ ಮುಂದಿನ ಬಾರಿಯೂ ಸಚಿವರಾಗಲಿದ್ದಾರೆ ಎಂಬುದು ಖಚಿತʼʼ ಎಂದು ಗಡ್ಕರಿ ಅವರು ಹೇಳಿದ್ದಾರೆ. ಜತೆಗೆ ನಾನು ತಮಾಷೆ ಮಾಡುತ್ತಿದ್ದೇನೆ ಎಂದೂ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (Republican Party of India-RPI)ದ ನಾಯಕ ರಾಮದಾಸ್ ಅಠಾವಳೆ ಅವರು ಮೂರು ಅವಧಿಯಲ್ಲಿಯೂ ಸಚಿವರಾಗಿದ್ದು, ನಾಲ್ಕನೆಯ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಮರಳಿದರೆ ಮತ್ತೆ ಸಚಿವರಾಗಿ ಮುಂದುವರಿಯಲಿದ್ದಾರೆ ಎಂದು ಗಡ್ಕರಿ ತಮ್ಮ ಸಹೋದ್ಯೋಗಿಯ ಕಾಲೆಳೆದಿದ್ದಾರೆ.

ರಾಮದಾಸ್ ಅಠಾವಳೆ ಹೇಳಿದ್ದೇನು?

ನಾಗ್ಪುರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲಲಿ ಮಾತನಾಡಿದ ರಾಮದಾಸ್ ಅಠಾವಳೆ ಅವರು, ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಸರ್ಕಾರದ ಮಿತ್ರ ಪಕ್ಷವಾದ ಆರ್‌ಪಿಐ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 10ರಿಂದ 12 ಸ್ಥಾನಗಳಲ್ಲಿ ಸ್ಪರ್ಧಿಸಲು ಇಚ್ಛಿಸುವುದಾಗಿ ತಿಳಿಸಿದ್ದಾರೆ. ಉತ್ತರ ನಾಗ್ಪುರ, ಉಮ್ರೆಡ್ (ನಾಗ್ಪುರ), ವಾಶಿಮ್ ಮತ್ತಿತರ ಕ್ಷೇತ್ರಗಳ ಟಿಕೆಟ್‌ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದಾರೆ.

ಅಠಾವಳೆ ಅವರ ಆರ್‌ಪಿಐಯು ಬಿಜೆಪಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿಯನ್ನು ಒಳಗೊಂಡ ಮಹಾಯುತಿ ಮೈತ್ರಿಕೂಟದ ಭಾಗವಾಗಿದೆ. “ಆರ್‌ಪಿಐ-ಎ 18 ಸಂಭಾವ್ಯರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಕೆಲವೇ ದಿನಗಳಲ್ಲಿ ಮಹಾಯುತಿ ಪಾಲುದಾರರೊಂದಿಗೆ ಹಂಚಿಕೊಳ್ಳಲಿದೆ ಮತ್ತು ಸೀಟು ಹಂಚಿಕೆ ಒಪ್ಪಂದದಲ್ಲಿ ಕನಿಷ್ಠ 10ರಿಂದ 12 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ” ಎಂದು ಅಠಾವಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚುನಾವಣೆ ಯಾವಾಗ?

288 ಸೀಟುಗಳನ್ನೊಳಗೊಂಡ ಮಹಾರಾಷ್ಟ್ರ ವಿಧಾನಸಭೆಯ ಚುನಾವಣೆ ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿದೆ. ಸದ್ಯ ಬಿಜೆಪಿ 103 ಸೀಟುಗಳನ್ನು ಹೊಂದಿದ್ದರೆ ಶಿವಸೇನೆ 40, ಎನ್‌ಸಿಪಿ 41, ಕಾಂಗ್ರೆಸ್‌ 40, ಶಿವಸೇನೆ (ಯುಬಿಟಿ) 15, ಎನ್‌ಸಿಪಿ (ಎಸ್‌ಪಿ) 13 ಸ್ಥಾನ ಪಡೆದಿದೆ. ಇತರರು 29 ಕಡೆ ಜಯ ಸಾಧಿಸಿದ್ದಾರೆ. ಕೆಲವು ಕ್ಷೇತ್ರಗಳು ಖಾಲಿಯಾಗಿವೆ.

ಈ ಸುದ್ದಿಯನ್ನೂ ಓದಿ: Nitin Gadkari: ಪ್ರತಿಪಕ್ಷಗಳಿಂದ ನಿತಿನ್ ಗಡ್ಕರಿಗೆ ಪ್ರಧಾನಿ ಹುದ್ದೆಯ ಆಫರ್! ಇವರ ಪ್ರತಿಕ್ರಿಯೆ ಏನಿತ್ತು?