Friday, 22nd November 2024

No Beggars: ಭಿಕ್ಷುಕರೇ ಇಲ್ಲದ ದೇಶವಿದು! ವಿದೇಶಿಯರ ಪ್ರವೇಶಕ್ಕೂ ಇಲ್ಲಿದೆ ಕಠಿಣ ನಿಯಮ

No Beggars

ಭಿಕ್ಷುಕರು (Beggars) ಅಥವಾ ನಿರಾಶ್ರಿತರೇ (homeless people) ಇಲ್ಲದ ದೇಶ ಈ ಪ್ರಪಂಚದಲ್ಲಿ ಇದೆಯೇ ಎನ್ನುವ ಪ್ರಶ್ನೆ ಎಂದಾದರೂ ಮನದಲ್ಲಿ ಮೂಡಿದೆಯೇ? ಯಾಕೆಂದರೆ ಹಾದಿ, ಬೀದಿ, ದೇವಸ್ಥಾನ, ಪ್ರವಾಸಿ ತಾಣ.. ಹೀಗೆ ಎಲ್ಲೆಂದರಲ್ಲಿ ಭಾರತದಲ್ಲಿ (india) ಭಿಕ್ಷುಕರು, ನಿರಾಶ್ರಿತರು ಕಾಣಸಿಗುತ್ತಾರೆ. ಹೀಗಿರುವಾಗ ಪ್ರಪಂಚದಲ್ಲಿ ಭಿಕ್ಷುಕರು ಅಥವಾ ನಿರಾಶ್ರಿತರು ಇಲ್ಲದ ದೇಶ (No Beggars) ಇರಲಿಕ್ಕಿಲ್ಲ ಎಂದು ನೀವೆಂದುಕೊಂಡರೆ ನಿಮ್ಮ ಊಹೆ ಖಂಡಿತಾ ತಪ್ಪು.

ಪ್ರಪಂಚದ ಯಾವುದೋ ಮೂಲೆಯಲ್ಲಿ ಅಲ್ಲ ಭಾರತದ ಪಕ್ಕದ ರಾಷ್ಟ್ರವೊಂದರಲ್ಲೇ (Bhutan) ನಿರಾಶ್ರಿತರು ಅಥವಾ ಭಿಕ್ಷುಕರು ಇಲ್ಲವೇ ಇಲ್ಲ ಎನ್ನಬಹುದು. ಭಾರತದ ನೆರೆಯ ರಾಷ್ಟ್ರವಾದ ಭೂತಾನ್‌ನಲ್ಲಿ ನಿರಾಶ್ರಿತರು ಅಥವಾ ಭಿಕ್ಷುಕರು ಇಲ್ಲವೇ ಇಲ್ಲ. ಯಾಕೆಂದರೆ ಇಲ್ಲಿನ ಸರ್ಕಾರ ಎಲ್ಲರಿಗೂ ವಸತಿ ಒದಗಿಸುವುದರ ಜತೆಗೆ ಆಹಾರ ಭದ್ರತೆಯನ್ನೂ ನೀಡುತ್ತಿದೆ.

ಭೂತಾನ್‌ನಲ್ಲಿ ಮನೆಯಿಲ್ಲದ ವ್ಯಕ್ತಿಗೆ ಮನೆ ನಿರ್ಮಿಸಲು ಮತ್ತು ತರಕಾರಿಗಳನ್ನು ಬೆಳೆಯಲು ಇಲ್ಲಿನ ರಾಜ ಸ್ವಲ್ಪ ಭೂಮಿಯನ್ನು ನೀಡುತ್ತಾನೆ. ಇದರಿಂದ ನಿರಾಶ್ರಿತರು, ಭಿಕ್ಷುಕರು ಸ್ವಾಲಂಬಿಗಳಾಗಿ ಬದುಕಬಹುದು. ಇಷ್ಟು ಮಾತ್ರವಲ್ಲ ಇಲ್ಲಿ ಎಲ್ಲರಿಗೂ ಚಿಕಿತ್ಸೆ ಉಚಿತವಾಗಿದೆ. ಭಾರತ ಮತ್ತು ಚೀನಾ ನಡುವೆ ಈ ನಿಗೂಢ ಮತ್ತು ಸುಂದರವಾದ ದೇಶವಿದೆ. ಇದು 1974ರವರೆಗೂ ಪ್ರವಾಸಿಗರಿಗೆ ತೆರೆದಿರಲಿಲ್ಲ. ಆದರೆ ಇಂದು ವಿವಿಧ ಸಾರಿಗೆಗಳ ಮೂಲಕ ಭೂತಾನ್ ಗೆ ಪ್ರವಾಸ ಮಾಡಬಹುದು. ಆದರೆ ಇಲ್ಲಿನ ರಾಜ ಅನೇಕ ವಿಧಾನಗಳ ಮೂಲಕ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯನ್ನು ಮಿತಿಗೊಳಿಸಲು ಪ್ರಯತ್ನಿಸುತ್ತಿದ್ದಾನೆ.

ಭೂತಾನ್ ದೇಶದ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.

No Beggars

ಇಂಟರ್ನೆಟ್, ದೂರದರ್ಶನ ಇತ್ತೀಚಿನವರೆಗೂ ಇರಲಿಲ್ಲ!

ಭೂತಾನ್‌ನಲ್ಲಿ ದೂರದರ್ಶನ ಮತ್ತು ಇಂಟರ್ನೆಟ್ ಅನ್ನು 1999ರವರೆಗೆ ಅಧಿಕೃತವಾಗಿ ನಿಷೇಧಿಸಲಾಗಿತ್ತು. ಆದರೆ ಆಧುನಿಕ ತಂತ್ರಜ್ಞಾನದಿಂದ ದೇಶವನ್ನು ಪ್ರತ್ಯೇಕಿಸುವುದು ಅಸಾಧ್ಯವಾಗಿತ್ತು. ಹೀಗಾಗಿ ರಾಜನು ಈ ನಿಯಮವನ್ನು ರದ್ದುಗೊಳಿಸಿದ. ಹೀಗಾಗಿ ಭೂತಾನ್ ದೂರದರ್ಶನವನ್ನು ಬಳಸಲು ಪ್ರಾರಂಭಿಸಿದ ವಿಶ್ವದ ಕೊನೆಯ ದೇಶಗಳಲ್ಲಿ ಒಂದಾಗಿದೆ.

ಜನರ ಅತೃಪ್ತಿ ನಿವಾರಣೆಗೆ ಸಮಿತಿ

ಜನರ ಆಂತರಿಕ ಶಾಂತಿಯನ್ನು ಕಾಪಾಡುವ ಸಲುವಾಗಿ 2008ರಲ್ಲಿ ರಾಷ್ಟ್ರೀಯ ಸಂತೋಷ ಸಮಿತಿಯನ್ನು ರಚಿಸಲಾಗಿದೆ. ಜನಗಣತಿ ಪ್ರಶ್ನಾವಳಿಯಲ್ಲಿಯೂ ಸಹ ನಿಮ್ಮ ಜೀವನದಲ್ಲಿ ತೃಪ್ತಿ ಹೊಂದಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಸೂಚಿಸುವ ಅಂಕಣವಿದೆ. ಈ ಸಮಿತಿಯ ಜೊತೆಗೆ ಸಂತೋಷದ ಸಚಿವಾಲಯವೂ ಇದೆ. ಭೂತಾನ್‌ನಲ್ಲಿನ ಜೀವನದ ಗುಣಮಟ್ಟವನ್ನು ಹಣಕಾಸು ಮತ್ತು ಮಾನಸಿಕ ಮೌಲ್ಯಗಳನ್ನು ಸಮತೋಲನಗೊಳಿಸುವುದರ ಮೂಲಕ ನಿರ್ಧರಿಸಲಾಗುತ್ತದೆ.

ನಿರಾಶ್ರಿತರೇ ಇಲ್ಲ

ಭೂತಾನ್‌ನಲ್ಲಿ ಯಾರೂ ಬೀದಿಯಲ್ಲಿ ವಾಸಿಸುವುದಿಲ್ಲ. ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲು ಮತ್ತು ತರಕಾರಿಗಳನ್ನು ನೆಡಲು ಭೂಮಿಯನ್ನು ಇಲ್ಲಿನ ರಾಜ ನೀಡುತ್ತಾನೆ.

ಉಚಿತ ಆರೋಗ್ಯ ರಕ್ಷಣೆ

ಪ್ರತಿಯೊಬ್ಬ ಭೂತಾನ್ ಪ್ರಜೆಗೂ ಉಚಿತ ಆರೋಗ್ಯ ರಕ್ಷಣೆಯ ಹಕ್ಕಿದೆ. ಭೂತಾನ್‌ನಲ್ಲಿ, ಎರಡೂ ವಿಧದ ಔಷಧಗಳಿವೆ. ಒಂದು ಸಾಂಪ್ರದಾಯಿಕ ಮತ್ತು ಇನ್ನೊಂದು ಶಾಸ್ತ್ರೀಯ. ಯಾರಿಗೆ, ಯಾವ ವಿಧಾನದ ಔಷಧ ಬೇಕೆಂದು ನಿರ್ಧರಿಸುವ ಹಕ್ಕು ಜನರಿಗಿದೆ.

No Beggars

ರಾಷ್ಟ್ರೀಯ ಉಡುಗೆ

ಭೂತಾನ್ ಜನರು ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸುತ್ತಾರೆ. ಎಡ ಭುಜದ ಮೇಲೆ ಕಂಡುಬರುವ ಸ್ಕಾರ್ಫ್ ನ ಬಣ್ಣದಿಂದ ವ್ಯಕ್ತಿಯ ಸ್ಥಿತಿ ಮತ್ತು ಸಾಮಾಜಿಕ ಮಟ್ಟವನ್ನು ಗುರುತಿಸಲಾಗುತ್ತದೆ. ಸಾಮಾನ್ಯರು ಬಿಳಿ ಶಿರೋವಸ್ತ್ರಗಳನ್ನು ಧರಿಸುತ್ತಾರೆ. ಆದರೆ ಶ್ರೀಮಂತರು ಮತ್ತು ಸನ್ಯಾಸಿಗಳು ಹಳದಿ ಧರಿಸುತ್ತಾರೆ.

ಧೂಮಪಾನ ನಿಷೇಧ

ಭೂತಾನ್ ರಾಜನು ಈ ದೇಶದಲ್ಲಿ ತಂಬಾಕು ಕೃಷಿ, ಕೊಯ್ಲು ಮತ್ತು ಮಾರಾಟವನ್ನು ನಿಷೇಧಿಸಿದ್ದಾನೆ. ಹೀಗಾಗಿ ಭೂತಾನ್‌ನಲ್ಲಿ ತಂಬಾಕು ಖರೀದಿಸುವುದು ಅಸಾಧ್ಯ. ಈ ದೇಶಕ್ಕೆ ಭೇಟಿ ನೀಡುವ ಪ್ರವಾಸಿಗರು ತಮ್ಮೊಂದಿಗೆ ಸಿಗರೇಟ್ ತೆಗೆದುಕೊಂಡು ಹೋಗಲು ಬಯಸಿದರೆ ಭಾರಿ ಪ್ರಮಾಣದ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಎಲ್ಲರಲ್ಲೂ ಇದೆ ಪರಿಸರ ಕಾಳಜಿ

ಭೂತಾನ್ ನಲ್ಲಿ ಪ್ರತಿಯೊಬ್ಬರೂ ಪರಿಸರ ಮತ್ತು ಪ್ರಕೃತಿಯ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಮರಗಳ ಬೆಳವಣಿಗೆಗೆ ವಿಶೇಷ ಗಮನ ನೀಡುತ್ತಾರೆ. 2015 ರಲ್ಲಿ ಭೂತಾನ್ ಒಂದು ಗಂಟೆಯಲ್ಲಿ 50,000 ಮರಗಳನ್ನು ನೆಡುವಲ್ಲಿ ಯಶಸ್ವಿಯಾದಾಗ ವಿಶ್ವದಾಖಲೆಯನ್ನು ಹೊಂದಿದೆ.

No Beggars

ವಿದೇಶಿಯರನ್ನು ಮದುವೆಯಾಗುವಂತಿಲ್ಲ!

ಭೂತಾನ್‌ನಲ್ಲಿ ವಿದೇಶಿಯರನ್ನು ಮದುವೆಯಾಗುವುದನ್ನು ನಿಷೇಧಿಸಲಾಗಿದೆ. ಇಲ್ಲಿನ ರಾಜನು ತನ್ನ ಅನನ್ಯತೆ ಮತ್ತು ಪ್ರಪಂಚದ ಇತರ ಭಾಗಗಳಿಂದ ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನವನ್ನು ಮಾಡಿದ್ದಾನೆ. ಮದುವೆ ಸಮಾರಂಭಗಳಲ್ಲಿ ಸನ್ಯಾಸಿಗಳು ಮಂತ್ರಗಳನ್ನು ಪಠಿಸುತ್ತಾರೆ. ಈ ಪ್ರಕ್ರಿಯೆಯು ನವವಿವಾಹಿತರು ನಿಕಟ ಮಾನಸಿಕ ಬಂಧವನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ ಎನ್ನಲಾಗುತ್ತದೆ.

ಮಾರ್ಗದರ್ಶಕರು ಇಲ್ಲದೆ ಪ್ರವಾಸ ಮಾಡುವಂತಿಲ್ಲ

ಪ್ರವಾಸಿಗರಿಗೆ ರಾಜ್ಯದ ಬಾಗಿಲು ತೆರೆದಿದ್ದರೂ ಇಡೀ ರಾಜ್ಯಕ್ಕೆ ಪ್ರವೇಶವಿಲ್ಲ. ಎಲ್ಲಾ ದಾಖಲೆಗಳು, ವೀಸಾಗಳನ್ನು ರಾಜ್ಯದಿಂದ ನಿಗದಿಪಡಿಸಿದ ಕಂಪನಿಯಿಂದ ನೀಡಲಾಗುತ್ತದೆ. ಪರವಾನಗಿ ಪಡೆಯಲು, ವಿಮಾನಯಾನ ಟಿಕೆಟ್‌, ಹೊಟೇಲ್, ತೆರಿಗೆ, ವೀಸಾ, ವಿಮೆ, ಮಾರ್ಗದರ್ಶಿ ಸೇವೆ ಸೇರಿದಂತೆ ಹಲವು ಸೌಲಭ್ಯಗಳಿಗೆ ಎಲ್ಲಾ ವೆಚ್ಚಗಳನ್ನು ಮುಂಚಿತವಾಗಿ ಪಾವತಿಸಬೇಕು.

Viral News: ಸೋಶಿಯಲ್‌ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ ಟ್ರಂಪ್‌ಗೆ ಪ್ರಧಾನಿ ಮೋದಿ ಅಭಿನಂದನೆ ಪೋಸ್ಟ್; ಒಂದೇ ದಿನದಲ್ಲಿ ಗಳಿಸಿದ ವ್ಯೂವ್ಸ್‌ ಎಷ್ಟು ಗೊತ್ತಾ?

ಈ ದೇಶದಲ್ಲಿ ಮಾರ್ಗದರ್ಶಿ ಇದ್ದರೆ ಮಾತ್ರ ಪ್ರವಾಸಕ್ಕೆ ಅನುಮತಿ. ಒಬ್ಬರೇ ಎಲ್ಲೂ ಹೋಗಲು ಸಾಧ್ಯವಿಲ್ಲ. ಈ ದೇಶದಲ್ಲಿ ಒಂದು ದಿನಕ್ಕೆ ಪ್ರವಾಸಿಗರಿಗೆ ಸರಿಸುಮಾರು 21,075 ರೂ . ವೆಚ್ಚವಾಗುತ್ತದೆ.

No Beggars

ಟ್ರಾಫಿಕ್ ಲೈಟ್‌ಗಳಿಲ್ಲ

ಭೂತಾನ್ ರಾಜಧಾನಿಯಲ್ಲಿ ಯಾವುದೇ ಟ್ರಾಫಿಕ್ ಲೈಟ್‌ಗಳಿಲ್ಲ. ಎಲ್ಲಾ ರಸ್ತೆ ಚಿಹ್ನೆಗಳನ್ನು ಕೈಯಿಂದ ಚಿತ್ರಿಸಲಾಗಿದೆ.