Sunday, 15th December 2024

ಲಖೀಂಪುರ್ ಖೇರಿ ಪ್ರಕರಣಕ್ಕೆ ಸಿಬಿಐ ತನಿಖೆ ಪರಿಹಾರವಲ್ಲ: ಸುಪ್ರೀಂ

Supreme Court

ನವದೆಹಲಿ: ಲಖೀಂಪುರ್ ಖೇರಿಯಲ್ಲಿ ಎಂಟು ಮಂದಿಯ ಬರ್ಬರ ಹತ್ಯೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವುದು ಪರಿಹಾರ ವಾಗದಿರಬಹುದು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಮತ್ತಿತರರ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳಲು ಉತ್ತರ ಪ್ರದೇಶ ಪೊಲೀಸರ ಮೃಧು ನಿಲುವು ಆರೋಪ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ಪೀಠದ ಮುಂದೆ ಬಂದಿತು.

ಬೇರೆ ಯಾವುದೇ ಏಜೆನ್ಸಿಯಿಂದ ತನಿಖೆ ನಡೆಸುವ ಪರ್ಯಾಯವನ್ನು ಪರಿಗಣಿಸಲು ರಾಜ್ಯವನ್ನು ಕೇಳಿದ ಪೀಠ, ತನಿಖೆಯನ್ನು ಕೇಂದ್ರ ಏಜೆನ್ಸಿಗೆ ವರ್ಗಾಯಿಸು ವುದರ ವಿರುದ್ಧ ಮೌಖಿಕವಾಗಿ ಹೇಳಿತು.

ಹರೀಶ್ ಸಾಳ್ವೆ ಅವರೇ, ರಾಜ್ಯ ಅಗತ್ಯ ಕ್ರಮ ತೆಗೆದುಕೊಳ್ಳುವ ವಿಶ್ವಾಸವಿದೆ. ಸಿಬಿಐ ಕೂಡಾ ಪರಿಹಾರವಲ್ಲ, ಸಿಬಿಐ ನಲ್ಲಿಯೂ ನಮಗೆ ಆಸಕ್ತಿ ಇಲ್ಲ, ಆದ್ದರಿಂದ ನೀವು ಬೇರೆ ಪರ್ಯಾಯ ಮಾರ್ಗ ಹುಡುಕಿ, ರಜೆಯ ನಂತರ ನಾವು ಅದನ್ನು ತೆಗೆದುಕೊಳ್ಳುತ್ತೇವೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.

ಪ್ರಕರಣವನ್ನು ಸಿಬಿಐಗೆ ವಹಿಸಲು ರಾಜ್ಯ ಸರ್ಕಾರದಿಂದ ಮನವಿ ಮಾಡಲಾಗಿದಯೇ ಎಂಬುದರ ಕುರಿತಂತೆ ಹರೀಶ್ ಸಾಲ್ವೆ, ಅಂತಹ ಯಾವುದೇ ಮನವಿ ಬಂದಿಲ್ಲ, ಅದರ ಬಗ್ಗೆ ನ್ಯಾಯಾಲಯವೇ ತೀರ್ಮಾನ ಕೈಗೊಳ್ಳಬೇಕು, ಪ್ರಕರಣದ ತನಿಖಾ ಪ್ರಗತಿ ಬಗ್ಗೆ ಆತೃಪ್ತಿ ಇದ್ದರೆ ಸಿಬಿಐಗೆ ನೀಡಬಹುದು ಎಂದು ಹಿರಿಯ ವಕೀಲರು ಹೇಳಿದರು. ಆದಾಗ್ಯೂ, ಸಿಬಿಐ ತನಿಖೆಗೆ ಪರಿಹಾರವಲ್ಲ ಎಂದು ನ್ಯಾಯಪೀಠ ಹೇಳಿತು.