Sunday, 15th December 2024

ಜ.22 ರವರೆಗೆ ಚುನಾವಣಾ ರ‍್ಯಾಲಿ, ರೋಡ್‌ಶೋಗಳಿಗೆ ನಿಷೇಧ

ನವದೆಹಲಿ: ಭಾರತೀಯ ಚುನಾವಣಾ ಆಯೋಗವು ಶನಿವಾರ ರಾಜ್ಯಗಳಲ್ಲಿ ಚುನಾವಣಾ ರ‍್ಯಾಲಿಗಳು ಮತ್ತು ರೋಡ್‌ಶೋಗಳ ಮೇಲಿನ ನಿಷೇಧವನ್ನು ಜ.22 ರವರೆಗೆ ವಿಸ್ತರಿಸಿದೆ.

ಇದಲ್ಲದೆ, ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಗರಿಷ್ಠ 300 ವ್ಯಕ್ತಿಗಳೊಂದಿಗೆ ಅಥವಾ ಸಭಾಂಗಣದ ಸಾಮರ್ಥ್ಯದ 50% ರಷ್ಟು ಒಳಾಂಗಣ ಸಭೆಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿದೆ. ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಮಾದರಿ ನೀತಿ ಸಂಹಿತೆಯ ನಿಬಂಧನೆಗಳನ್ನು ಮತ್ತು ಸಾಂಕ್ರಾಮಿಕ ನಿಯಂತ್ರಣ ಕ್ರಮಗಳನ್ನು ಅನುಸರಿಸಲು ನಿರ್ದೇಶಿಸಿದೆ.

ಜ.8 ರಂದು, ಚುನಾವಣಾ ಆಯೋಗವು ಉತ್ತರ ಪ್ರದೇಶ, ಉತ್ತರಾಖಂಡ ಮಣಿಪುರ, ಗೋವಾ ಮತ್ತು ಪಂಜಾಬ್‌ಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವಾಗ, ಸಾರ್ವಜನಿಕ ರ‍್ಯಾಲಿಗಳು, ರೋಡ್‌ಶೋಗಳು ಮತ್ತು ಅಂತಹುದೇ ಬಹಿರಂಗ ಪ್ರಚಾರ ಕಾರ್ಯಕ್ರಮಗಳನ್ನು ಜ.15 ರವರೆಗೆ ನಿಷೇಧಿಸಿತ್ತು. ಈಗ ನಿಷೇಧವನ್ನು ಇನ್ನೊಂದು ವಾರದವರೆಗೆ ವಿಸ್ತರಿಸಲಾಗಿದೆ.