Sunday, 15th December 2024

ಚೆಕ್‌ಗಳ ನಗದು ವ್ಯವಹಾರಗಳಿಗೆ ಜಿಎಸ್‌ಟಿ ವಿಧಿಸುವುದಿಲ್ಲ: ನಿರ್ಮಲಾ ಸೀತಾರಾಮನ್‌

ನವದೆಹಲಿ: ಬ್ಯಾಂಕ್‌ಗಳಲ್ಲಿ ಚೆಕ್‌ಗಳ ಮೂಲಕ ನಡೆಯುವ ನಗದು ವ್ಯವಹಾರಗಳ ಮೇಲೆ ಜಿಎಸ್‌ಟಿ ವಿಧಿಸುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿ ದ್ದಾರೆ.

ಕೇಂದ್ರ ಸರ್ಕಾರದ ಹೊಸ ಜಿಎಸ್‌ಟಿ ನಿಯಮಗಳಲ್ಲಿ ಗೊಂದಲ ಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಸಚಿವರು ಸ್ಪಷ್ಟನೆ ನೀಡಿದ್ದು, ಬ್ಯಾಂಕ್‌ಗಳು ತಮ್ಮ ಚೆಕ್‌ಪುಸ್ತಕಗಳನ್ನು ಮುದ್ರಕರಿಂದ ಪಡೆಯುವ ವ್ಯವಹಾರದ ಮೇಲೆ ಮಾತ್ರ ಜಿಎಸ್‌ಟಿ ವಿಧಿಸಲಾಗುತ್ತದೆ.

ಗ್ರಾಹಕರು ನೀಡುವ ಚೆಕ್‌ ವ್ಯವಹಾರಗಳ ಮೇಲೆ ಯಾವುದೇ ಜಿಎಸ್‌ಟಿ ಇರುವುದಿಲ್ಲ. ಬ್ಯಾಂಕ್‌ಗಳ ಕ್ಯಾಶ್‌ ಕೌಂಟರ್‌ ಗಳಲ್ಲಿ ನಗದು ಹಿಂಪಡೆಯುವುದಕ್ಕೆ ಜಿಎಸ್‌ಟಿ ಇಲ್ಲ. ಆದರೆ, ಬ್ಯಾಂಕುಗಳಿಂದ ಮಾಸಿಕ 5 ಬಾರಿ ಹಾಗೂ ಎಟಿಎಂಗಳಿಂದ ಮಾಸಿಕ 5 ಬಾರಿ ಹಣವನ್ನು ಶುಲ್ಕ ರಹಿತವಾಗಿ ಹಿಂಪಡೆಯಲು ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.

ಚಿತಾಗಾರಗಳಲ್ಲಿ ಶವಸಂಸ್ಕಾರ ಪ್ರಕ್ರಿಯೆಗೆ ಯಾವುದೇ ಜಿಎಸ್‌ಟಿ ಇಲ್ಲ. ಆದರೆ, ಹೊಸತಾಗಿ ಚಿತಾಗಾರಗಳ ನಿರ್ಮಾಣಕ್ಕೆ ಜಿಎಸ್‌ಟಿ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ.