Wednesday, 23rd October 2024

No Honking City: ಈ ನಗರದಲ್ಲಿ ಕೇಳುವುದೇ ಇಲ್ಲ ಹಾರ್ನ್ ಶಬ್ದ!

No Honking City

ದೇಶದ ಯಾವುದೇ ನಗರಕ್ಕೆ ಹೋಗಿ ಟ್ರಾಫಿಕ್‌ನಲ್ಲಿ (trafic) ಒಂದು ಕ್ಷಣ ನಿಂತರೂ ಸಾಕು ಕಿವಿ ಮುಚ್ಚಿಕೊಳ್ಳಬೇಕು ಎಂದೆನಿಸುತ್ತದೆ. ಯಾಕೆಂದರೆ ಒಂದರ ಮೇಲೆ ಒಂದರಂತೆ ಕೇಳಿ ಬರುವ ಹಾರ್ನ್ ಶಬ್ದಗಳು (Horn sound) ನಮ್ಮನ್ನು ಒಮ್ಮೆ ಅಲ್ಲಿಂದ ದೂರ ಓಡಿದರೆ ಸಾಕು ಎನ್ನುವಂತೆ ಮಾಡುತ್ತದೆ. ಕೆಲವೊಮ್ಮೆ ಇದು ಅತೀ ಹಿಂಸೆ ಎಂದೆನಿಸುವಂತೆ ಮಾಡುತ್ತದೆ. ಆದರೆ ಈ ಒಂದು ನಗರ ಮಾತ್ರ ಸಂಪೂರ್ಣ ಹಾರ್ನ್ ಶಬ್ದದಿಂದ (No Honking City) ಮುಕ್ತವಾಗಿದೆ.

ಈ ನಗರದಲ್ಲಿ ಯಾವುದೇ ವಾಹನ ಚಾಲಕರು ಹಾರ್ನ್ ಹಾಕುವುದಿಲ್ಲ. ಇದರಿಂದ ಈ ನಗರ ಶಬ್ದ ಮಾಲಿನ್ಯದಿಂದ ಸಂಪೂರ್ಣ ಮುಕ್ತವಾಗಿದೆ ಎನ್ನಬಹುದು. ಹಾಗಂತ ಈ ನಗರ ಯಾವುದೋ ಹೊರದೇಶದಲ್ಲಿ ಇರಬಹುದು ಎಂದು ನೀವಂದುಕೊಂಡರೆ ಅದು ತಪ್ಪು. ಯಾಕೆಂದರೆ ಈ ನಗರ ನಮ್ಮದೇ ದೇಶದಲ್ಲಿದೆ. ಭಾರತದ ಈಶಾನ್ಯ ಭಾಗದಲ್ಲಿರುವ ಮಿಝೋರಾಂ ರಾಜ್ಯದ ಐಜ್ವಾಲ್ ಎಂಬ ನಗರದಲ್ಲಿ ಯಾವುದೇ ವಾಹನ ಚಾಲಕರು ಹಾರ್ನ್ ಮಾಡುವುದೇ ಇಲ್ಲ. ಯಾಕೆಂದರೆ ಇದು ‘ನೋ ಹಾಂಕಿಂಗ್’ ನಗರ.

No Honking City

ಎಷ್ಟು ಜನ, ಎಷ್ಟು ವಾಹನ?

‘ನೋ ಹಾಂಕಿಂಗ್’ ನಿಯಮವನ್ನು ಜಾರಿಗೆ ತಂದಿರುವ ಭಾರತದ ಮೊದಲ ಮತ್ತು ಏಕೈಕ ನಗರವೆಂದರೆ ಐಜ್ವಾಲ್. ಇಲ್ಲಿ ಯಾವುದೇ ಕಾನೂನು ಅಥವಾ ಅಧಿಕಾರಿಗಳ ಸಹಾಯವಿಲ್ಲದೆ ಈ ನೀತಿಯನ್ನು ಜಾರಿಗೆ ತರಲಾಗಿದೆ. ಇಲ್ಲಿ ಖಾಸಗಿ ವಾಹನಗಳು ಮಾತ್ರವಲ್ಲ ಸರ್ಕಾರಿ ವಾಹಗಳು ಕೂಡ ಹಾರ್ನ್ ಮಾಡುವುದಿಲ್ಲ. ಸುಮಾರು 3.5 ಲಕ್ಷ ಜನರಿರುವ ಈ ನಗರದಲ್ಲಿ 1.25 ಲಕ್ಷಕ್ಕೂ ಹೆಚ್ಚು ವಾಹನಗಳು ನೋಂದಣಿಯಾಗಿವೆ.

ಶಬ್ದ ಮಾಲಿನ್ಯದ ಪರಿಣಾಮ?

ಕಾರ್ ಹಾರ್ನ್‌ನ ಸರಾಸರಿ ಡೆಸಿಬಲ್ ಮಟ್ಟವು ಸುಮಾರು 110 ಡಿಬಿ ಆಗಿದೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುತ್ತದೆ. ಯಾಕೆಂದರೆ 60-70 ಡಿಬಿಗಿಂತ ಹೆಚ್ಚಿನ ಯಾವುದೇ ಶಬ್ದವು ಕ್ರಮೇಣ ಶ್ರವಣ ದೋಷಕ್ಕೆ ಕಾರಣವಾಗಬಹುದು. ಶಬ್ಧ ಮಾಲಿನ್ಯವು ನಗರಗಳಲ್ಲಿ ಎಷ್ಟು ಗಂಭೀರ ಸಮಸ್ಯೆಯಾಗಿದೆ ಎಂದರೆ ಇಎನ್‌ಟಿ ತಜ್ಞರ ಪ್ರಕಾರ ನಗರವಾಸಿಗಳಲ್ಲಿ ಹೆಚ್ಚಿನವರು 20 ಡಿಬಿ ಶ್ರವಣ ದೋಷದಿಂದ ಬಳಲುತ್ತಿದ್ದಾರೆ. ಶಬ್ದ ಮಾಲಿನ್ಯಕ್ಕೆ ಮುಖ್ಯ ಕಾರಣ ಹಾರ್ನ್ ಮಾಡುವುದು ಎಂದು ಪರಿಗಣಿಸಲಾಗಿದೆ.

2013ರಲ್ಲಿ ಬಿಡುಗಡೆಯಾದ ವರದಿಯಲ್ಲಿ ಮುಂಬಯಿ ಅನ್ನು ದೇಶದ ಅತ್ಯಂತ ಗದ್ದಲದ ನಗರವೆಂದು ಘೋಷಿಸಲಾಗಿದೆ. ಅನಂತರ ಲಕ್ನೋ, ಹೈದರಾಬಾದ್, ನವದೆಹಲಿ ಮತ್ತು ಚೆನ್ನೈ. ಗುರುಗ್ರಾಮದಲ್ಲಿ ಶೇ. 70ರಷ್ಟು ಶಬ್ದ ಮಾಲಿನ್ಯವು ಹಾರ್ನ್‌ನಿಂದ ಉಂಟಾಗುತ್ತಿದೆ. ಹಾರ್ನ್ ನಿಯಮ ಉಲ್ಲಂಘನೆಗಾಗಿ ವಿಧಿಸುವ ದಂಡವು ಅತ್ಯಲ್ಪವಾಗಿದೆ.

ಒಬ್ಬ ವ್ಯಕ್ತಿಯು 55 ಡಿಬಿಗಿಂತ ಹೆಚ್ಚಿನ ಧ್ವನಿಯಲ್ಲಿ ದೀರ್ಘಕಾಲ ಇದ್ದರೆ ಹೃದ್ರೋಗ ಮತ್ತು ಪಾರ್ಶ್ವವಾಯು ಉಂಟಾಗುವ ಅಪಾಯವಿದೆ. ಟ್ರಾಫಿಕ್ ಶಬ್ದದಿಂದಾಗಿ ಒಂದು ಮಿಲಿಯನ್ ಆರೋಗ್ಯಕರ ಜೀವನ ವರ್ಷಗಳು ಕಳೆದುಹೋಗುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ.

Gold Price Today: ಮತ್ತೆ ಇಳಿದ ಚಿನ್ನದ ದರ; ಇಂದಿನ ಬೆಲೆ ಚೆಕ್‌ ಮಾಡಿ

ಐಜ್ವಾಲ್ ನಗರದ ಕಿರು ಚಿತ್ರ ಹೀಗಿದೆ…

ಐಜ್ವಾಲ್ ನಗರದ ಕಥೆಯನ್ನು ಕಿರುಚಿತ್ರದಲ್ಲಿ ದಾಖಲಿಸಲಾಗಿದೆ. ಈ ನಗರದ ಜನರು ತಮ್ಮ ಮನೆಯನ್ನು ಶಬ್ಧದಿಂದ ಮುಕ್ತಗೊಳಿಸಲು ಒಟ್ಟಿಗೆ ಸೇರುವುದನ್ನು ತೋರಿಸುವ ಕಿರುಚಿತ್ರ ಇದಾಗಿದೆ. ನಟ, ನಿರ್ದೇಶಕ, ನೃತ್ಯ ಸಂಯೋಜಕ ಪ್ರಭುದೇವ ಅವರ ಕಲ್ಪನೆಯನ್ನು ಈ ಚಿತ್ರ ಮೂಡಿ ಬಂದಿದೆ. ನಾಗಾಲ್ಯಾಂಡ್ ಮತ್ತು ಮಿಜೋರಾಂನ ಆರು ಯುವಕರು ಇದನ್ನು ಚಿತ್ರೀಕರಿಸಿದ್ದಾರೆ.