Thursday, 12th December 2024

ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ನಾಗರಿಕರ ನೋಂದಣಿ ಸದ್ಯಕ್ಕಿಲ್ಲ: ನಿತ್ಯಾನಂದ ರೈ

ನವದೆಹಲಿ: ದೇಶಾದ್ಯಂತ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಐಸಿ) ಯೋಜನೆ ಸಿದ್ಧಪಡಿಸುವ ಕುರಿತು ಯಾವುದೇ ನಿರ್ಧಾರವನ್ನು ಸರ್ಕಾರ ತೆಗೆದು ಕೊಂಡಿಲ್ಲ ಎಂದು ಕೇಂದ್ರ ಸಚಿವ ನಿತ್ಯಾನಂದ ರೈ ಸಂಸತ್ತಿಗೆ ಹೇಳಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿ, 2021 ರ ಜನಗಣತಿಯ ಮೊದಲ ಹಂತದ ಜೊತೆಗೆ ಪೌರತ್ವ ಕಾಯ್ದೆ, 1955 ರ ಅಡಿಯಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು (NPR) ನವೀಕರಿಸಲು ಸರ್ಕಾರ ನಿರ್ಧರಿ ಸಿದೆ. ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ನಾಗರಿಕರ ನೋಂದಣಿಯನ್ನು (NRC) ತಯಾರಿಸಲು ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದರು.

ಅಸ್ಸಾಂನಲ್ಲಿ ಎನ್‌ಆರ್‌ಸಿಯನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳ ನಿರ್ಧಾರಗಳ ಫಲಿತಾಂಶ ದಿಂದ ತೃಪ್ತರಾಗದ ಯಾವುದೇ ವ್ಯಕ್ತಿಯು ದಿನಾಂಕದಿಂದ 120 ದಿನಗಳಲ್ಲಿ ಗೊತ್ತುಪಡಿಸಿದ ವಿದೇಶಿ ನ್ಯಾಯಮಂಡಳಿಯ ಮುಂದೆ ಮೇಲ್ಮನವಿ ಸಲ್ಲಿಸಬಹುದು. ಅಂತೆಯೇ ಅಸ್ಸಾಂನಲ್ಲಿ ಎನ್‌ಆರ್‌ಸಿ ಯಿಂದ ಹೊರಗಿಡಲ್ಪಟ್ಟವರು ಇನ್ನೂ ಲಭ್ಯವಿರುವ ಎಲ್ಲ ಕಾನೂನು ಪ್ರಕ್ರಿಯೆಯನ್ನು ಮುಗಿಸಿಲ್ಲವಾದ್ದರಿಂದ, ಅವರ ರಾಷ್ಟ್ರೀಯತೆಯ ಪರಿಶೀಲನೆಯ ಪ್ರಶ್ನೆಯು ಈ ಹಂತದಲ್ಲಿ ಉದ್ಭವಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎನ್‌ಆರ್‌ಸಿಯನ್ನು ಅಸ್ಸಾಂನಲ್ಲಿ ಮಾತ್ರ ನವೀಕರಿಸಲಾಗಿದೆ. 2019 ರಲ್ಲಿ NRC ಯ ಅಂತಿಮ ಪಟ್ಟಿ ಪ್ರಕಟಿಸಿದಾಗ, 3.3 ಕೋಟಿ ಅರ್ಜಿದಾರರಲ್ಲಿ ಒಟ್ಟು 19.06 ಲಕ್ಷವನ್ನು ಹೊರತುಪಡಿಸಲಾಯಿತು, ಇದು ದೊಡ್ಡ ರಾಜಕೀಯ ವಿವಾದವನ್ನು ಪ್ರಚೋದಿಸಿತ್ತು. NPR ನ ಉದ್ದೇಶವು ದೇಶದ ಪ್ರತಿಯೊಬ್ಬ ಸಾಮಾನ್ಯ ನಿವಾಸಿಗಳ ಸಮಗ್ರ ಗುರುತಿನ ದತ್ತಾಂಶವನ್ನು ರಚಿಸುವುದಾಗಿದೆ. ಈ ಡೇಟಾಬೇಸ್ ಜನಸಂಖ್ಯಾ ಹಾಗೂ ಬಯೋಮೆಟ್ರಿಕ್ ವಿವರಗಳನ್ನು ಒಳಗೊಂಡಿರುತ್ತದೆ. ಎನ್‌ಪಿಆರ್ ದೇಶದ ಸಾಮಾನ್ಯ ನಿವಾಸಿಗಳ ರಿಜಿಸ್ಟರ್ ಆಗಿದೆ.