Friday, 15th November 2024

No Toll Tax: ವಾಹನ ಮಾಲಕರಿಗೆ ಗುಡ್‌ನ್ಯೂಸ್‌; 45 ದಿನಗಳ ಕಾಲ ಟೋಲ್‌ ಕಟ್ಟಬೇಕಾಗಿಲ್ಲ: ಯಾವಾಗಿನಿಂದ ಈ ಯೋಜನೆ? ಇಲ್ಲಿದೆ ವಿವರ

No Toll Tax

ಲಖನೌ: ಕಾರು, ಜೀಪು ಸೇರಿದಂತೆ ವಿವಿಧ ವಾಹನ ಮಾಲಕರು ಮತ್ತು ಚಾಲಕರಿಗೆ ಉತ್ತರ ಪ್ರದೇಶ (Uttar Pradesh) ಸರ್ಕಾರ ಗುಡ್‌ನ್ಯೂಸ್‌ ನೀಡಿದೆ. ರಾಜ್ಯ ಸರ್ಕಾರವು ಟೋಲ್ ತೆರಿಗೆಯ ಬಗ್ಗೆ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಕಾರು ಚಾಲಕರು 45 ದಿನಗಳ ಕಾಲ ಟೋಲ್‌ ಕಟ್ಟ ಬೇಕಾಗಿಲ್ಲ. ಹೌದು, ಉತ್ತರ ಪ್ರದೇಶದಲ್ಲಿ ಕಾರು ಚಾಲಕರಿಗೆ ಟೋಲ್ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಯಾಕಾಗಿ ಸೌಲಭ್ಯ? ಯಾವಾಗಿನಿಂದ ಈ ಯೋಜನೆ ಜಾರಿಗೆ ಬರಲಿದೆ? ಮುಂತಾದ ವಿವರ ಇಲ್ಲಿದೆ (No Toll Tax).

ಮುಂದಿನ ವರ್ಷ ಜನವರಿಯಲ್ಲಿ ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಮಹಾಕುಂಭ ಮೇಳ (Maha Kumbh Mela) ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್‌ ನೇತೃತ್ವದ ರಾಜ್ಯ ಸರ್ಕಾರ ಈ ಮಹತ್ವದ ಘೋಷಣೆ ಹೊರಡಿಸಿದೆ.

ಕುಂಭ ಮೇಳಕ್ಕಾಗಿ ಸಂಚರಿಸುವ ಅನೇಕ ಟೋಲ್‌ ಪ್ಲಾಜಾಗಳನ್ನು ತೆರಿಗೆ ಮುಕ್ತಗೊಳಿಸಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highway Authority of India)ದ ಸಹಯೋಗದೊಂದಿಗೆ ಉತ್ತರ ಪ್ರದೇಶ ಸರ್ಕಾರ ಈ ಮಹತ್ವದ ಯೋಜನೆ ಜಾರಿಗೊಳಿಸಲಿದೆ. ಈ ಮೂಲಕ ಮಹಾಕುಂಭ ಮೇಳಕ್ಕೆ ಆಗಮಿಸುವ ಭಕ್ತರು ತಮ್ಮ ವಾಹನಗಳಿಗೆ 7 ಟೋಲ್‌ ಪ್ಲಾಜಾಗಳಲ್ಲಿ ಹಣ ಪಾವತಿಸಬೇಕಾಗಿಲ್ಲ.

ಯಾವೆಲ್ಲ ಟೋಲ್‌ ಪ್ಲಾಜಾಗಳಲ್ಲಿ ಉಚಿತ ಪಯಣ?

ವರದಿಗಳ ಪ್ರಕಾರ ಚಿತ್ರಕೂಟ್ ಹೆದ್ದಾರಿಯ ಉಮಾಪುರ್ ಟೋಲ್ ಪ್ಲಾಜಾ, ಅಯೋಧ್ಯೆ ಹೆದ್ದಾರಿಯ ಮೌಯಿಮಾ ಟೋಲ್, ಲಕ್ನೋ ಹೆದ್ದಾರಿಯಲ್ಲಿನ ಅಂಧಿಯಾರಿ ಟೋಲ್, ಮಿರ್ಜಾಪುರ ರಸ್ತೆಯ ಮುಂಗರಿ ಟೋಲ್, ವಾರಣಾಸಿ ರಸ್ತೆಯ ಹಂಡಿಯಾ ಟೋಲ್ ಮತ್ತು ಕಾನ್ಪುರ ರಸ್ತೆಯ ಕೊಖ್ರಾಜ್ ಟೋಲ್ ಮೂಲಕ ಭಕ್ತರು ಮಹಾಕುಂಭ ಮೇಳದ ವೇಳೆ 45 ದಿನಗಳವರೆಗೆ ಉಚಿತವಾಗಿ ಸಂಚರಿಸಬಹುದು ಎಂದು ಯೋಗಿ ಆದಿತ್ಯನಾಥ್‌ ಸರ್ಕಾರ ಘೋಷಿಸಿದೆ. ಪ್ರಯಾಗ್ ರಾಜ್‌ನಲ್ಲಿ ನಡೆಯುವ ಈ ಐತಿಹಾಸಿಕ ಮಹಾಕುಂಭ ಮೇಳಕ್ಕೆ ಉಚಿತ ಪ್ರವೇಶ ನೀಡಲಾಗುವುದು. 2025ರ ಜನವರಿ 13ರಿಂದ ಫೆಬ್ರವರಿ 26ರ ತನಕ ಈ ಸೌಲಭ್ಯ ಸಿಗಲಿದೆ.

40 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆ

ಈ ಬಾರಿಯ ಮಹಾಕುಂಭ ಮೇಳದಲ್ಲಿ ಸುಮಾರು 40 ಕೋಟಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಹೀಗಾಗಿ ಸಂಗಮ ಸ್ಥಳದಲ್ಲಿ ಮತ್ತು ನಗರದಲ್ಲಿ ಮೂಲ ಸೌಕರ್ಯ ಒದಗಿಸಲು ಸಿದ್ದತೆ ನಡೆಸಲಾಗುತ್ತಿದೆ. ಬಹುತೇಕ ಭಕ್ತರು ತಮ್ಮದೇ ವಾಹನಗಳಲ್ಲಿ ಆಗಮಿಸುವ ನಿರೀಕ್ಷೆ ಇರುವುದರಿಂದ ಟೋಲ್‌ ಅನ್ನು ತೆರಿಗೆಯಿಂದ ಮುಕ್ತಗೊಳಿಸಲಾಗುತ್ತಿದೆ. ಮೇಳ ಆಯೋಜಕರ ಪ್ರಕಾರ ಸುಮಾರು ಶೇ. 55ರಷ್ಟು ಭಕ್ತರು ಕಾರು, ಜೀಪು, ಬಸ್‌, ಟ್ರಕ್‌ ಮತ್ತು ಟ್ರ್ಯಾಕ್ಟರ್‌ ಮೂಲಕ ಆಗಮಿಸಲಿದ್ದಾರೆ. ಇನ್ನುಳಿದ ಶೇ. 45ರಷ್ಟು ಭಕ್ತರು ರೈಲು, ವಿಮಾನಗಳಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸಲಿದ್ದಾರೆ. ಈ ವೇಳೆ ಸುಮಾರು 1,200 ವಿಶೇಷ ರೈಲುಗಳ ವ್ಯವಸ್ಥೆ ಮಾಡಲೂ ಸರ್ಕಾರ ಚಿಂತನೆ ನಡೆಸಿದೆ. ಜತೆಗೆ 7,000 ಹೆಚ್ಚುವರಿ ಬಸ್‌ ಓಡಾಟ ನಡೆಸಲಿದೆ.

ಈ ಬಾರಿಯ ಕುಂಭಮೇಳ 2025ರ ಜನವರಿ 13ರಿಂದ ಫೆಬ್ರವರಿ 26ರ ತನಕ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯಲಿದೆ. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಈ ಕುಂಭಮೇಳ ಕೋಟ್ಯಂತರ ಭಕ್ತರನ್ನು ಸೆಳೆಯುತ್ತದೆ.

ಈ ಸುದ್ದಿಯನ್ನೂ ಓದಿ: Clean Ganga Mission : ಕುಂಭ ಮೇಳಕ್ಕೆ ಸಿದ್ಧತೆ; ಸ್ವಚ್ಛ ಗಂಗಾ ಮಿಷನ್‌ಗಾಗಿ 1,062 ಕೋಟಿ ರೂ. ಬಿಡುಗಡೆ