Sunday, 15th December 2024

ಕೇಜ್ರಿವಾಲ್’ಗೆ ಮತ್ತೆ ಭಾರೀ ಹಿನ್ನಡೆ: ಜಾಮೀನಿಗೆ ತಡೆಯಾಜ್ಞೆ

ವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮತ್ತೆ ಭಾರೀ ಹಿನ್ನಡೆಯುಂಟಾಗಿದೆ. ಜಾಮೀನು ನಿರೀಕ್ಷೆಯಲ್ಲಿದ್ದ ದೆಹಲಿ ಸಿಎಂ ಮಂಗಳವಾರ ಆಘಾತ ಅನುಭವಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್‌ಗೆ ಕೆಳ ನ್ಯಾಯಾಲಯದಿಂದ ನೀಡಲಾಗಿದ್ದ ಜಾಮೀನಿಗೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ಮುಂದುವರೆಸಿದ್ದು, ಆ ಮೂಲಕ ಮತ್ತೆ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲೇ ಕಾಲ ಕಳೆಯಬೇಕಾದಗಿದೆ.

ಇತ್ತೀಚೆಗಷ್ಟೇ ಕೆಳ ನ್ಯಾಯಾಲಯ ಕೇಜ್ರಿವಾಲ್‌ಗೆ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಇದೀಗ ಹೈಕೋರ್ಟ್ ಇಡಿ ಮನವಿಗೆ ಅಸ್ತು ಎಂದಿದೆ.

ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ದೆಹಲಿಯ ಮದ್ಯ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಇಡಿ ಬಂಧಿಸಿತ್ತು. ಇತ್ತೀಚೆಗೆ, ಕೇಜ್ರಿವಾಲ್ ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್‌ನಿಂದ ಜೂನ್ 1 ರವರೆಗೆ ಮಧ್ಯಂತರ ಜಾಮೀನು ಪಡೆದಿದ್ದರು. ಬಳಿಕ ಜೂನ್ 2ರಂದು ಶರಣಾಗಿದ್ದರು.

ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಕೇಜ್ರಿವಾಲ್ ಕೆಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ. ಆದರೆ, ಜಾಮೀನು ತೀರ್ಪನ್ನು ಜಾರಿ ನಿರ್ದೇಶನಾಲಯ ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ನಂತರ ಕಳೆದ ವಿಚಾರಣೆ ವೇಳೆ ಹೈಕೋರ್ಟ್ ಜಾಮೀನಿಗೆ ತಡೆ ನೀಡಿತ್ತು. ಈ ನಿಷೇಧದ ವಿರುದ್ಧ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್‌ ಆದೇಶ ಬರುವವರೆಗೆ ಕಾಯುವಂತೆ ಸುಪ್ರೀಂ ಕೋರ್ಟ್‌ ಹೇಳಿತ್ತು.

ದೆಹಲಿ ಹೈಕೋರ್ಟ್ ಮಂಗಳವಾರ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯ ತೀರ್ಪು ನೀಡಿದೆ. ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರಿದ್ದ ಪೀಠವು ರೌಸ್ ಅವೆನ್ಯೂ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಿದೆ.