ಪಣಜಿ: ಗೋವಾದ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ಜಲಪಾತಗಳು ಮತ್ತು ನದಿಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ರಾಜ್ಯ ಅರಣ್ಯ ಇಲಾಖೆ ನಿಷೇಧ ಹೇರಿದೆ.
ದೂಧ್ ಸಾಗರದಂತಹ ಜಲಪಾತಗಳು ಭಾನುವಾರದ ರಜಾ ದಿನಗಳಲ್ಲಿ ವಿಶೇಷವಾಗಿ ಜನಸಂದಣಿಯಿಂದ ಕೂಡಿರುತ್ತದೆ. ಮಳೆಗಾಲದ ಸಂದರ್ಭದಲ್ಲಿ ಜಲಪಾತಗಳಲ್ಲಿ ನೀರಿನ ಹರಿವು ಹೆಚ್ಚುತ್ತಿರುವುದರಿಂದ ಅವಘಡ ಸಂಭವಿಸುವ ಸಾಧ್ಯತೆಯಿರುತ್ತದೆ ಎಂದು ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯ ಇಲಾಖೆ ಈ ನಿಷೇಧ ಹೇರಿದೆ.
ಕಳೆದ ವರ್ಷ ಗೋವಾದ ವಿವಿಧ ಜಲಪಾತಗಳಲ್ಲಿ ಅವಘಡ ಸಂಭವಿಸಿತ್ತು.
ಕಳೆದ ಜುಲೈನಲ್ಲಿ ಮೈನಾಪಿ ಮತ್ತು ನೇತ್ರಾವಳಿ ಜಲಪಾತಗಳಲ್ಲಿ ಇಬ್ಬರು ಪ್ರವಾಸಿಗರು ಮುಳುಗಿ ಸಾವನ್ನಪ್ಪಿದ್ದರು. ಈ ಘಟನೆಯ ನಂತರ ಮಳೆಗಾಲದ ಸಂದರ್ಭದಲ್ಲಿ ಈ ಜಲಪಾತದ ಬಳಿ ತೆರಳಲು ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು. ಪ್ರಸಕ್ತ ವರ್ಷ ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ಗೋವಾದ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವ ಜಲಪಾತಕ್ಕೆ ಮಳೆಗಾಲದಲ್ಲಿ ನಿಷೇಧ ಹೇರಲಾಗಿದೆ.