Friday, 20th September 2024

Chandrababu Naidu: ಆಂಧ್ರಪ್ರದೇಶದ ದೇವಾಲಯಗಳಲ್ಲಿ ಹಿಂದೂಗಳಿಗೆ ಮಾತ್ರ ಉದ್ಯೋಗ: ಸಿಎಂ ಚಂದ್ರಬಾಬು ನಾಯ್ಡು ಘೋಷಣೆ

Chandrababu Naidu

ಅಮರಾವತಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಆಂಧ್ರಪ್ರದೇಶ (Andhra Pradesh)ದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು(Chandrababu Naidu) ಅವರು ರಾಜ್ಯದ ದೇವಸ್ಥಾನಗಳಲ್ಲಿ ಹಿಂದೂಗಳಿಗೆ ಮಾತ್ರ ಕೆಲಸ  ನೀಡುವುದಾಗಿ ಘೋಷಿಸಿದ್ದಾರೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಪ್ರಮುಖ ಸಭೆಯಲ್ಲಿ ಅವರು ಈ ಘೋಷಣೆಯನ್ನು ಹೊರಡಿಸಿದ್ದಾರೆ. ಜತೆಗೆ ಸಭೆಯಲ್ಲಿ ರಾಜ್ಯದ ವಿವಿಧ ದೇವಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರ ಸಂಬಳವನ್ನು ಹೆಚ್ಚಿಸಲೂ ನಿರ್ಧರಿಸಲಾಗಿದೆ.

ಸಭೆಯಲ್ಲಿ ಚಂದ್ರಬಾಬು ನಾಯ್ಡು ಅವರು ದೇವಾಲಯದ ನಿರ್ವಹಣೆಯನ್ನು ಪುನರುಜ್ಜೀವನಗೊಳಿಸುವ, ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ಆಂಧ್ರಪ್ರದೇಶದಾದ್ಯಂತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ವ್ಯಾಪಕ ಯೋಜನೆಯನ್ನು ಮಂಡಿಸಿದ್ದಾರೆ.

ಸಂಬಳ ಹೆಚ್ಚಳ

ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ರಾಜ್ಯದ ವಿವಿಧ ದೇವಾಲಯಗಳಲ್ಲಿ ಕಾರ್ಯ ನಿರ್ವಹಿಸುವ ಸುಮಾರು 1,683  ಅರ್ಚಕರ ಮಾಸಿಕ ಸಂಬಳವನ್ನು 10,000 ರೂ.ಯಿಂದ 15,000 ರೂ.ಗೆ ಹೆಚ್ಚಿಸಲು ತೀರ್ಮಾನಿಸಿದೆ. ಅಲ್ಲದೆ ಧೂಪ ದೀಪ ನೈವೇದ್ಯಂ ಯೋಜನೆ (Dhoopa Deepa Naivedyam Scheme)ಯಡಿ ರಾಜ್ಯದ ಸಣ್ಣ ದೇವಾಲಯಗಳಿಗೆ ಮಾಸಿಕವಾಗಿ ನೀಡುವ 10,000 ರೂ. ಧನ ಸಹಾಯವನ್ನು 15,000 ರೂ.ಗೆ ಏರಿಸಲಾಗಿದೆ. ದೇವಾಲಯ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು ಎಂದು ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

“ಆಂಧ್ರಪ್ರದೇಶದ ಪ್ರತಿಯೊಂದು ದೇವಾಲಯದಲ್ಲೂ ಆಧ್ಯಾತ್ಮಿಕತೆ ಬೆಳೆಯಬೇಕು. ಭಕ್ತರು ದೇವಾಲಯದತ್ತ ಆಕರ್ಷಿಸುವ ರೀತಿಯಲ್ಲಿ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸಬೇಕು. ಇದಕ್ಕಾಗಿ ದೇವಾಲಯಗಳು ಮತ್ತು ಅವುಗಳ ಸುತ್ತಮುತ್ತಲಿನ ಪ್ರದೇಶಗಳನ್ನು ಅತ್ಯಂತ ಸ್ವಚ್ಛವಾಗಿಡುವುದು ಅತ್ಯಗತ್ಯ” ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ. ವೇದ್ಯಾಭ್ಯಾಸ ಪೂರೈಸಿ ಸದ್ಯ ನಿರುದ್ಯೋಗಿಗಳಾಗಿರುವ ಯುವ ಜನತೆಗೆ ಮಾಸಿಕ 3,000 ರೂ. ಭತ್ಯೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ದೇವಾಲಯಗಳಲ್ಲಿ ಕೌರಿಕ್ಷಕರಾಗಿ ಕಾರ್ಯ ನಿರ್ವಹಿಸುವರಿಗೆ ಸಿಎಂ 25,000 ರೂ. ಮಾಸಿಕ ಸಂಬಳ ಘೋಷಿಸಿದ್ದಾರೆ.

ದೇವಾಲಯಗಳ ಅಭಿವೃದ್ಧಿಯ ಮೇಲ್ವಿಚಾರಣೆಗಾಗಿ ಪ್ರವಾಸೋದ್ಯಮ ಇಲಾಖೆ, ಹಿಂದೂ ದತ್ತಿ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸುವುದಾಗಿ ಅವರು ತಿಳಿಸಿದ್ದಾರೆ. ವಿಶೇಷವಾಗಿ ಅರಣ್ಯ ಪ್ರದೇಶಗಳಲ್ಲಿರುವ ದೇವಾಲಯಗಳ ನೈಸರ್ಗಿಕ ಸೌಂದರ್ಯ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಕಾಪಾಡಲೂ ನಿರ್ಧರಿಸಲಾಗಿದೆ. ಸಭೆಯಲ್ಲಿ ದೇವಾಲಯದ ಟ್ರಸ್ಟ್‌ಗಳಿಗೆ ಇನ್ನೂ ಇಬ್ಬರು ಮಂಡಳಿಯ ಸದಸ್ಯರನ್ನು ಸೇರಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಹಿಂದಿನ ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಆಡಳಿತದ ವೇಳೆ ಹಿಂದೂ ದೇವಾಲಯಗಳ ಮೇಲೆ ನಡೆದ ದಾಳಿಗಳನ್ನು ಚಂದ್ರಬಾಬು ನಾಯ್ಡು ಅವರು ಖಂಡಿಸಿದ್ದಾರೆ. ಇಂತಹ ಅಪರಾದ ಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

“ಆಂಧ್ರಪ್ರದೇಶದಲ್ಲಿ ಬಲವಂತದ ಧಾರ್ಮಿಕ ಮತಾಂತರಗಳು ನಡೆಯಬಾರದು. ಹಿಂದೂ ದೇವಾಲಯಗಳಲ್ಲಿ ಹಿಂದೂಯೇತರರಿಗೆ ಯಾವುದೇ ಉದ್ಯೋಗ ನೀಡಬಾರದು. ಆಂಧ್ರಪ್ರದೇಶದ 1,110 ದೇವಾಲಯಗಳಿಗೆ ಟ್ರಸ್ಟಿಗಳನ್ನು ನೇಮಿಸಲಾಗುವುದು” ಎಂದು ಸಿಎಂ ಭರವಸೆ ನೀಡಿದ್ದಾರೆ. ಪ್ರಸ್ತುತ ಆಕ್ರಮಿಸಿಕೊಂಡಿರುವ 87,000 ಎಕರೆ ದೇವಾಲಯದ ಭೂಮಿಯನ್ನು ಕಾನೂನು ಕ್ರಮದ ಮೂಲಕ ಹಿಂಪಡೆಯಲಾಗುವುದು ಎಂದುಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.