Thursday, 12th December 2024

ಗದ್ದಲ, ಕೋಲಾಹಲಗಳಿಗೆ ಇಲ್ಲ ಎಲ್ಲೆ: ಕಲಾಪ ಎರಡು ಬಾರಿ ಮುಂದೂಡಿಕೆ

ನವದೆಹಲಿ: ಭೋಜನ ಅವಧಿಗೆ ಮುನ್ನ ಎರಡನೇ ಬಾರಿ ಬುಧವಾರ ಕೂಡ ರಾಜ್ಯಸಭಾ ಕಲಾಪ ಮುಂದೂಡಲಾಗಿದೆ.

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ಬಗ್ಗೆ ಚರ್ಚೆ ನಡೆಸಬೇಕೆಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಸದನದಲ್ಲಿ ತೀವ್ರ ಗದ್ದಲ, ಕೋಲಾಹಲ ಏರ್ಪಡಿಸಿದ ಕಾರಣ ಕಲಾಪ ಮುಂದೂಡಲಾಗಿದೆ.

ಬೆಳಗ್ಗೆ ಕಲಾಪ ಆರಂಭವಾದ ಕೂಡಲೇ ವಿರೋಧ ಪಕ್ಷದ ಸದಸ್ಯರು ತೀವ್ರ ಗದ್ದಲ, ಕೋಲಾಹಲವೆಬ್ಬಿಸಿದರು. ಇದರಿಂದಾಗಿ ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು. ಮತ್ತೆ ಕಲಾಪ ಸೇರಿದಾಗಲೂ ಪರಿಸ್ಥಿತಿ ಬದಲಾಗದೆ  ಕಲಾಪವನ್ನು 2 ಗಂಟೆಗೆ ಮುಂದೂಡಲಾಯಿತು.

ರಾಜ್ಯಸಭಾ ಸಭಾಪತಿ ಎಂ ವೆಂಕಯ್ಯ ನಾಯ್ಡು ಮತ್ತು ಉಪ ಸಭಾಪತಿ ಹರಿವಂಶ್ ಅವರ ಮನವಿಯನ್ನು ವಿರೋಧ ಪಕ್ಷದ ನಾಯಕರು ಆಲಿಸದಿದ್ದಾಗ ಕಲಾಪ ಮುಂದೂಡುವ ಅನಿವಾರ್ಯ ಪರಿಸ್ಥಿತಿಯುಂಟಾಯಿತು.

ಇಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸದನದ ಮುಂದೆ ಪ್ರಸ್ತಾಪ ಮಂಡಿಸಿ, ಮೂರು ಕೃಷಿ ಮಸೂದೆಗಳು ಮತ್ತು ಇತರ ರೈತರ ಸಂಬಂಧಿ ವಿಷಯಗಳನ್ನು ಚರ್ಚಿಸಬೇಕೆಂದು ನಿಯಮ 267ರಡಿ ಉಳಿದ ಕಲಾಪ ರದ್ದುಪಡಿಸಬೇಕೆಂದು ಪ್ರಸ್ತಾವ ಮಂಡಿಸಿದರು.

ಸಭಾಪತಿಗಳು ಪ್ರಶ್ನೋತ್ತರ ಅವಧಿ ಮುಂದುವರಿಸುತ್ತಿದ್ದಂತೆ, ಪ್ರತಿಭಟನಾಕಾರರು ತಮ್ಮ ಧ್ವನಿಯನ್ನು ಹೆಚ್ಚು ಮಾಡಿದರು. ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಪ್ರಾರಂಭಿಸಿದರು.

ಲೋಕಸಭಾ ಕಲಾಪವನ್ನು ಗದ್ದಲಗಳಿಂದಾಗಿ ಮುಂದೂಡಲಾಗಿತ್ತು. ಬೆಳಿಗ್ಗೆ ಸದನ ಕರೆದ ಕೂಡಲೇ ಪ್ರತಿಪಕ್ಷ ನಾಯಕರು ಘೋಷಣೆಗಳನ್ನು ಕೂಗಲಾರಂಭಿಸಿದರು.

ಕಲಾಪ ಸುಗಮವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುವಂತೆ ಸ್ಪೀಕರ್ ಓಂ ಬಿರ್ಲಾ ಸದಸ್ಯರನ್ನು ಕೇಳಿದರು. ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುವ ಘೋಷಣೆಗಳು ಮುಂದುವರೆದಂತೆ, ಸ್ಪೀಕರ್ ಸಭೆಯನ್ನು ಮಧ್ಯಾಹ್ನ 12.30 ರವರೆಗೆ ಮುಂದೂಡಿದರು.