ದಿಸ್ಪುರ: ಅಸ್ಸಾಂನಲ್ಲಿ ಕೆಲವು ʼವಿಐಪಿ ಸಂಸ್ಕೃತಿʼ ತೊಡೆದು ಹಾಕುವುದಾಗಿ ಹೇಳಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ತಾವು ಮತ್ತು ಮುಖ್ಯ ಕಾರ್ಯದರ್ಶಿ ಜುಲೈ 1ರಿಂದ ತಮ್ಮ ವಿದ್ಯುತ್ ಬಿಲ್ ಅನ್ನು ತಾವೇ ಪಾವತಿಸುವುದಾಗಿ ಪ್ರಕಟಿಸಿದ್ದಾರೆ.
ಜತೆಗೆ ‘ಜುಲೈಯಿಂದ ಎಲ್ಲ ಸರ್ಕಾರಿ ನೌಕರರು ತಮ್ಮ ಸ್ವಂತ ವಿದ್ಯುತ್ ಬಳಕೆಗೆ ತಾವೇ ಪಾವತಿಸಬೇಕಾಗುತ್ತದೆ’ ಎಂದೂ ತಿಳಿಸಿದ್ದಾರೆ.
‘ಸಚಿವರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳ ನಿವಾಸಗಳ ವಿದ್ಯುತ್ ಬಿಲ್‌ಗಳನ್ನು ಸರ್ಕಾರವೇ ಇಷ್ಟು ದಿನ ಪಾವತಿಸುತ್ತ ಬಂದಿದೆ. ಈ ವ್ಯವಸ್ಥೆ ಸುಮಾರು 75 ವರ್ಷಗಳ ಸುದೀರ್ಘ ಕಾಲದಿಂದ ನಡೆದುಕೊಂಡು ಬಂದಿದೆʼʼ ಎಂದು ಅವರು ಹೇಳಿದ್ದಾರೆ.
ಅಸ್ತಿತ್ವದಲ್ಲಿರುವ ವಿಐಪಿ ಸಂಸ್ಕೃತಿಯಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಇದನ್ನು ತಪ್ಪಿಸಿದರೆ ವಿದ್ಯುತ್ ಮಂಡಳಿಗೆ ವಿದ್ಯುತ್ ಶುಲ್ಕವನ್ನು ಹೆಚ್ಚಿಸಬೇಕಾದ ಪ್ರಮೇಯ ಎದುರಾಗುವುದಿಲ್ಲ. ಹೀಗಾಗಿ ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ ಎನ್ನಲಾಗಿದೆ.
‘ನಾನು ಕೂಡ ಮೂರು ವರ್ಷಗಳಿಂದ ಉಚಿತ ವಿದ್ಯುತ್ ಬಳಸಿದ್ದೇನೆ. ಈ ಬಗ್ಗೆ ನನಗೆ ತಿಳಿದಿರಲಿಲ್ಲ. ಇತ್ತೀಚೆಗೆ ಚರ್ಚೆಯ ಸಮಯದಲ್ಲಿ ಅದರ ಬಗ್ಗೆ ತಿಳಿದುಕೊಂಡೆ. ನಮ್ಮ ವಿದ್ಯುತ್ ಬಿಲ್ ನಾವೇ ಪಾವತಿಸುವುದಿಂದ ವಿದ್ಯುತ್ ಮಂಡಳಿಗೆ ಸಹಾಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಶರ್ಮಾ ಹೇಳಿದ್ದಾರೆ.
‘ಸಿಎಂ ಕಾರ್ಯದರ್ಶಿ, ಗೃಹ ಮತ್ತು ಹಣಕಾಸು ಇಲಾಖೆಗಳನ್ನು ಹೊರತುಪಡಿಸಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ರಾತ್ರಿ 8 ಗಂಟೆಗೆ ಸ್ವಯಂ ಚಾಲಿತವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಕ್ರಮ ಕೈಗೊಂಡಿದ್ದೇವೆ. ಈ ಕ್ರಮವು ಈಗಾಗಲೇ ರಾಜ್ಯದಾದ್ಯಂತ 8,000 ಸರ್ಕಾರಿ ಕಚೇರಿಗಳು, ಶಾಲೆಗಳಲ್ಲಿ ಜಾರಿಯಲ್ಲಿದೆ’ ಎಂದು ಹಿಮಂತ ಶರ್ಮಾ ಮಾಹಿತಿ ನೀಡಿದ್ದಾರೆ.