ಡೆಹ್ರಾಡೂನ್: ಕುಂಭಮೇಳ(2021)ದ ಹಿನ್ನೆಲೆಯಲ್ಲಿ ದೇಶ ವಿರೋಧಿ ಶಕ್ತಿಗಳನ್ನು ನಿಗ್ರಹಿಸುವ ಮುನ್ನೆಚ್ಚರಿಕಾ ಕ್ರಮವಾಗಿ ಹರಿದ್ವಾರಕ್ಕೆ ಎನ್ ಎಸ್ ಜಿ ಕಮಾಂಡೋಸ್ ಗಳನ್ನು ಕಳುಹಿಸಲಾಗುವುದು ಎಂದು ಉತ್ತರಾಖಂಡ್ ಸರ್ಕಾರ ಘೋಷಿಸಿದೆ.
ಕುಂಭಮೇಳದ ಸಂದರ್ಭದಲ್ಲಿ ಎನ್ ಎಸ್ ಜಿ ಕಳುಹಿಸುವ ಕುರಿತು ಎನ್ ಎಸ್ ಜಿ ಮೇಜರ್ ಜನರಲ್ ವಿಎಸ್ ರಾನಡೆ ಅವರು ಉತ್ತರಾಖಂಡ್ ಪೊಲೀಸ್ ಕಮೀಷನರ್ ಅಶೋಕ್ ಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕುಂಭಮೇಳದ ಸಂದರ್ಭದಲ್ಲಿ ಎನ್ ಎಸ್ ಜಿಯ ಎರಡು ತಂಡಗಳನ್ನು ಕಳುಹಿಸಲಾಗುವುದು. ಎನ್ ಎಸ್ ಜಿ ತಂಡ ನಮ್ಮ ಭಯೋತ್ಪಾದಕ ನಿಗ್ರಹ ದಳಕ್ಕೂ ತರಬೇತಿ ನೀಡಲಿದೆ ಎಂದು ತಿಳಿಸಿದ್ದಾರೆ.
ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಹಾಗೂ ಜನಜಂಗುಳಿ, ಸುರಕ್ಷತೆ ಕುರಿತಂತೆ ಹರಿದ್ವಾರದಲ್ಲಿ ನಡೆಯಲಿರುವ ಕುಂಭ ಮೇಳಕ್ಕೆ ರಾಜ್ಯ ಸರ್ಕಾರ ಯಾವ ರೀತಿ ಕ್ರಮ ತೆಗೆದುಕೊಂಡಿದೆ ಎಂಬ ವರದಿ ಸಲ್ಲಿಸುವಂತೆ ಉತ್ತರಾಖಂಡ್ ಹೈಕೋರ್ಟ್ ಸೂಚಿಸಿತ್ತು.