ಭಾರತ ಮತ್ತು ಚೀನಾ ನಡುವಿನ (India and china border) ಗಡಿ ನಿಯಂತ್ರಣ ರೇಖೆಯ (Line of Actual Control) ಬಳಿ ಭದ್ರತೆಯನ್ನು ಹೆಚ್ಚಿಸಲಾಗುತ್ತಿದ್ದು, ಲಡಾಖ್‌ನಲ್ಲಿ (Ladakh) ಭಾರತದ ಅತಿ ಎತ್ತರದ ವಿಮಾನ ನಿಲ್ದಾಣ (Nyoma ALG) ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಸರಿಸುಮಾರು 13,700 ಅಡಿ ಎತ್ತರದಲ್ಲಿರುವ ಇದು ಚೀನಾಕ್ಕೆ ತುಂಬಾ ಹತ್ತಿರದಲ್ಲಿದೆ.
ಅಗತ್ಯ ಸಂದರ್ಭದಲ್ಲಿ ಭಾರತೀಯ ರಕ್ಷಣಾ ಪಡೆಗಳನ್ನು ತ್ವರಿತವಾಗಿ ಸಜ್ಜುಗಳಿಸಲು ಮತ್ತು ರಕ್ಷಣಾ ಕಾರ್ಯದ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಮಾಣಗೊಳಿಸಿರುವ ನ್ಯೋಮಾ ಅಡ್ವಾನ್ಸ್ಡ್ ಲ್ಯಾಂಡಿಂಗ್ ಗ್ರೌಂಡ್ (Nyoma Advanced Landing Ground ) ಚೀನಾದ ಗಡಿ ಭಾಗದ ಸಮೀಪದಲ್ಲಿದೆ.
ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಚೀನಾದ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ನಡುವಿನ ಸಂಪರ್ಕಕ್ಕೆ ಪೂರ್ವ ಲಡಾಖ್‌ನ ಮುಧ್-ನ್ಯೋಮಾದಲ್ಲಿರುವ ದೇಶದ ಅತ್ಯುನ್ನತ ವಿಮಾನ ಈ ನಿಲ್ದಾಣವು ಈಗ ಕಾರ್ಯಾಚರಣೆಗೆ ಬಹುತೇಕ ಸಿದ್ಧವಾಗಿದೆ.
ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಈ ವಿಮಾನ ನಿಲ್ದಾಣದ ಎತ್ತರದಿಂದಾಗಿ ಭಾರತವು ತನ್ನ ಉತ್ತರದ ಗಡಿಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ ಸಂಪನ್ಮೂಲಗಳನ್ನು ಕಲ್ಪಿಸಲು ಸಹಾಯವಾಗುತ್ತದೆ.
ತುರ್ತು ಪರಿಸ್ಥಿತಿಯಲ್ಲಿ ನೆಲದ ಮೇಲಿನ ಸಾರಿಗೆ ಸವಾಲಾಗಿರುತ್ತದೆ. ಈ ಸಂದರ್ಭದಲ್ಲಿ ಪರ್ವತದ ಎತ್ತರದ ಪ್ರದೇಶಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣದಿಂದ ಗಡಿ ಪ್ರದೇಶಗಳಿಗೆ ನೇರ ಪ್ರವೇಶವನ್ನು ವಾಯುಪಡೆಗೆ ಒದಗಿಸಿದಂತಾಗುತ್ತದೆ.
ಪ್ರಾಮುಖ್ಯತೆ
ಭಾರತ- ಚೀನಾ ಗಡಿ ಮೂಲಸೌಕರ್ಯಕ್ಕೆ ಹೆಚ್ಚಿನ ಗಮನ ನೀಡಬೇಕಾದ ಅವಧಿಯಲ್ಲಿ ಮುಧ್-ನ್ಯೋಮಾ ಅಡ್ವಾನ್ಸ್ಡ್ ಲ್ಯಾಂಡಿಂಗ್ ಗ್ರೌಂಡ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಗಲ್ವಾನ್‌ನಲ್ಲಿ ನಾಲ್ಕು ವರ್ಷಗಳ ಹಿಂದೆ ಗಡಿ ನಿಯಂತ್ರಣ ರೇಖೆಯ ಬಳಿ ಚೀನಾದೊಂದಿಗೆ ಬಿಕ್ಕಟ್ಟು ಪ್ರಾರಂಭವಾದಾಗಿನಿಂದ ಭಾರತವು ಲಡಾಖ್ ಮತ್ತು ನೆರೆಯ ಪ್ರದೇಶಗಳಲ್ಲಿ ತನ್ನ ಮೂಲಸೌಕರ್ಯ ಯೋಜನೆ ಕಾಮಗಾರಿಗಳನ್ನು ಅತ್ಯಂತ ವೇಗವಾಗಿ ನಡೆಸುತ್ತಿದೆ.
ಈ ನಿಟ್ಟಿನಲ್ಲಿ ನ್ಯೋಮಾ ಒಂದು ಗಮನಾರ್ಹ ಸೇರ್ಪಡೆಯಾಗಿದೆ. ಇದರಲ್ಲಿ ಹೊಸದಾಗಿ ನಿರ್ಮಿಸಲಾದ ರಸ್ತೆ, ಸುರಂಗ ಮತ್ತು ಸೇತುವೆಗಳೂ ಸೇರಿವೆ.
ಭಾರತ ಮತ್ತು ಚೀನಾ ನಡುವಿನ ಎರಡು ವಿವಾದಾಸ್ಪದ ಪ್ರದೇಶಗಳಾದ ಡೆಮ್‌ಚೋಕ್ ಮತ್ತು ಡೆಪ್ಸಾಂಗ್ ಬಯಲು ಪ್ರದೇಶಗಳಲ್ಲಿ ಇತ್ತೀಚಿನ ಮಿಲಿಟರಿ ಒಪ್ಪಂದಗಳ ಅನಂತರ ಏರ್‌ಫೀಲ್ಡ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅಲ್ಲದೇ ಗಸ್ತು ಸಂಚಾರವನ್ನು ಇದು ಪುನರಾರಂಭಿಸಲು ಅವಕಾಶ ಮಾಡಿಕೊಟ್ಟಿದೆ.
ಗಡಿಯಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು
ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲೂ ಇಲ್ಲಿ ಭಾರತವು ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಇದು ಗಡಿ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿರುವುದನ್ನು ಪ್ರತಿಬಿಂಬಿಸಿದೆ. ಗಡಿ ಸಂಪರ್ಕವನ್ನು ಬಲಪಡಿಸುವಲ್ಲಿ ಸರ್ಕಾರದ ಗಮನ, ವಿಶೇಷವಾಗಿ ಲಡಾಖ್‌ನಂತಹ ಪ್ರದೇಶಗಳಲ್ಲಿ ಮಿಲಿಟರಿ ಮತ್ತು ನಾಗರಿಕ ಅಗತ್ಯಗಳನ್ನು ಬೆಂಬಲಿಸುವ ಉದ್ದೇಶವನ್ನು ಹೊಂದಿದೆ.
ನ್ಯೋಮಾದಂತಹ ಎತ್ತರದ ಪ್ರದೇಶಗಳ ಅಭಿವೃದ್ಧಿಯು ಸ್ಥಳೀಯ ಸಂಪರ್ಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ದೂರದಲ್ಲಿರುವ ಜನ ಸಮುದಾಯದ ಕಲ್ಯಾಣಕ್ಕೆ ನಾಗರಿಕ ವಿಮಾನಗಳಿಗೂ ಆದ್ಯತೆ ನೀಡಲು ಅವಕಾಶ ನೀಡುತ್ತದೆ.
ನ್ಯೋಮಾದಲ್ಲಿನ ಈ ರಕ್ಷಣಾ ವಾಯುನೆಲೆಯು ಹಿಮಾಲಯದ ಗಡಿ ಮೂಲಸೌಕರ್ಯವನ್ನು ಬಲಪಡಿಸುವ, ಸಂಭಾವ್ಯ ಬೆದರಿಕೆಗಳನ್ನು ಎದುರಿಸಲು ಅದನ್ನು ಸಜ್ಜುಗೊಳಿಸುವ ಮತ್ತು ಸುರಕ್ಷಿತ, ಸಂಪರ್ಕಿತ ಗಡಿಯನ್ನು ಖಾತ್ರಿಪಡಿಸುವ ಭಾರತದ ವಿಶಾಲ ಗುರಿಯಲ್ಲಿ ಒಂದು ಮೈಲುಗಲ್ಲಾಗಿದೆ.
ಭಾರತ- ಚೀನಾ ಗಡಿಯಲ್ಲಿ ಏನಾಗುತ್ತಿದೆ?
2020ರಲ್ಲಿ ಗಲ್ವಾನ್ ಕಣಿವೆಯ ಘರ್ಷಣೆಯ ಬಳಿಕ ಉದ್ವಿಗ್ನತೆ ಮುಂದುವರಿದಿರುವ ಪೂರ್ವ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಬಯಲು ಪ್ರದೇಶಗಳಲ್ಲಿ ಭಾರತ ಮತ್ತು ಚೀನಾದ ಪಡೆಗಳ ನಡುವಿನ ವಿಭಜನೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ.
ಎರಡೂ ದೇಶಗಳ ಸ್ಥಳೀಯ ಮಿಲಿಟರಿ ಕಮಾಂಡರ್‌ಗಳು ಅಕ್ಟೋಬರ್ 30ರಂದು ಗಡಿ ನಿಯಂತ್ರಣ ರೇಖೆಯ ಬಳಿ ಭೇಟಿಯಾದರು.
ಹಂತಹಂತವಾಗಿ ವಿಭಜನೆ ಪ್ರಕ್ರಿಯೆಯನ್ನು ನಡೆಸಲಾಯಿತು. ಇದರ ಭಾಗವಾಗಿ ಮಂಗಳವಾರ ಡೆಪ್ಸಾಂಗ್‌ನಲ್ಲಿ ವೈಮಾನಿಕ ಪರಿಶೀಲನೆ ಪೂರ್ಣಗೊಂಡಿತು.
ಮಾನವರಹಿತ ವೈಮಾನಿಕ ವಾಹನಗಳ ತಾತ್ಕಾಲಿಕ ನಿಲುಗಡೆಯನ್ನು ತೆಗೆದುಹಾಕಲಾಗಿದ್ದು, ಯೋಜಿಸಿದಂತೆ ಪಡೆಗಳನ್ನು ಹಿಂತೆಗೆದುಕೊಳ್ಳಲಾಗಿದೆ.
ಅಕ್ಟೋಬರ್ 29ರಂದು ಸಂಜೆ ಡೆಪ್ಸಾಂಗ್ ಮತ್ತು ಡೆಮ್ಚೋಕ್ ಎರಡರಿಂದಲೂ ಡೇರೆಗಳು, ತಾತ್ಕಾಲಿಕ ರಚನೆ ಮತ್ತು ವಾಹನಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.