Thursday, 12th December 2024

ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಒಡಿಶಾ ಸರ್ಕಾರ

ಭುವನೇಶ್ವರ: ಸುಳ್ಳು ಮತ್ತು ಪ್ರಚೋದನಾಕಾರಿ ಸುದ್ದಿಗಳನ್ನು ಹಬ್ಬಿಸಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ವಾಗಿ ಕಾನೂನು ಕ್ರಮ ತೆಗೆದುಕೊಳ್ಳ ಬೇಕಾಗುತ್ತದೆ ಎಂದು ಒಡಿಶಾ ಸರ್ಕಾರ ಎಚ್ಚರಿಸಿದೆ.

ಕಳೆದ ಶುಕ್ರವಾರ ಬಾಲಸೋರ್ ಜಿಲ್ಲೆಯ ನಾಗಾಬಜಾರ್ ಬಳಿ ಮೂರು ರೈಲುಗಳು ಪರಸ್ಪರ ಡಿಕ್ಕಿ ಹೊಡೆದಿದ್ದ ರಿಂದ 275 ಮಂದಿ ಸಾವನ್ನಪ್ಪಿ ಸಾವಿರಾರು ಮಂದಿ ಗಾಯಗೊಂಡಿದ್ದರು.

ಈ ಘಟನೆ ನಡೆದ ಬಳಿಕ ರೈಲು ಅಪಘಾತಕ್ಕೆ ಇಲಾಖೆಯ ವೈಫಲ್ಯ, ಸಿಬ್ಬಂದಿಗಳ ನಿರ್ಲಕ್ಷ್ಯ, ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರ ಬೇಜವಬ್ದಾರಿ ತನ ಅಪಘಾತದ ಸ್ಥಳದಲ್ಲಿ ಮಸೀದಿ ಇದ್ದುದು ಹೀಗೆ ನಾನಾ ತರಹದ ವ್ಯಾಖ್ಯಾನಗಳು ಸಾಮಾಜಿಕ ಜಾಲಾತಾಣಗಳಲ್ಲಿ ಕೇಳಿಬರುತ್ತಿವೆ.

ಊಹಾಪೋಹಗಳನ್ನು ಹಬ್ಬಿಸುತ್ತಿರುವವರನ್ನು ಹೆಡೆಮುರಿ ಕಟ್ಟಲು ಒಡಿಶಾ ಸರ್ಕಾರ ಮುಂದಾಗಿದೆ. ರೈಲು ಅಪಘಾತದ ಬಗ್ಗೆ ಯಾರಾದರೂ ಸಾಮಾಜಿಕ ಜಾಲಾತಾಣಗಳಲ್ಲಿ ಸುಳ್ಳು ಇಲ್ಲವೇ ವದಂತಿಗಳನ್ನು ಹಬ್ಬಿಸಿ ಕೋಮುಸೌಹಾರ್ದತೆಗೆ ಧಕ್ಕೆ ತಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಲಾಗಿದೆ.