Sunday, 15th December 2024

ರಜೌರಿ ಜಿಲ್ಲೆಯಲ್ಲಿ ಗುಂಡಿನ ಕಾಳಗ: ಅಧಿಕಾರಿ ಹುತಾತ್ಮ

ಜಮ್ಮು: ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಸಂಭವಿಸಿದ ಗುಂಡಿನ ಕಾಳಗದಲ್ಲಿ ಭಾರತೀಯ ಸೇನಾ ಅಧಿಕಾರಿಯೊಬ್ಬರು ಹುತಾತ್ಮರಾದರು.

ಪ್ರತಿಯಾಗಿ ದಾಳಿ ನಡೆಸಿದ ವೇಳೆ ರಾಷ್ಟ್ರೀಯ ರೈಫಲ್ಸ್ ನ ಕಿರಿಯ ಅಧಿಕಾರಿ ಗಾಯಗೊಂಡರು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿರುವುದಾಗಿ ರಕ್ಷಣಾ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.

ಥಾನಮಂಡಿ ಎನ್ ಕೌಂಟರ್ ನಲ್ಲಿ ಉಗ್ರನೊಬ್ಬ ಮೃತಪಟ್ಟಿರುವುದಾಗಿ ವರದಿಯಾಗಿದೆ. ಆಗಸ್ಟ್ 6ರಂದು ಜಮ್ಮು-ಕಾಶ್ಮೀರದ ಪೊಲೀಸರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದರು.

ಥಾನಮಂಡಿ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆಂಬ ಮಾಹಿತಿ ಮೇರೆಗೆ ಭದ್ರತಾ ಪಡೆ ಕೂಂಬಿಂಗ್ ಕಾರ್ಯಾಚರಣೆ ನಡೆಸುವ ವೇಳೆ ಈ ಘಟನೆ ನಡೆದಿದ್ದು, ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದೆ.