ನವದೆಹಲಿ: ಅತಿದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆ ಓಲಾ ವಿರುದ್ಧ ಕಳೆದೊಂದು ವರ್ಷದಲ್ಲಿ 10,000ಕ್ಕೂ ಹೆಚ್ಚು ಕೇಸ್ ದಾಖಲಾಗಿವೆ. ಅನೇಕ ಗ್ರಾಹಕರು ಓಲಾ(Ola Electric) ವಿರುದ್ಧ ದೂರು ನೀಡಿದ್ದು, ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ(CCPA) ಸವಿಸ್ತಾರವಾದ ತನಿಖೆಗೆ ಮುಂದಾಗಿದೆ. CCPAಯ ತನಿಖಾ ವಿಭಾಗಗಳಾದ, ಡೈರೆಕ್ಟರ್ ಜನರಲ್ (DG) ತನಿಖಾ ಸಂಸ್ಥೆ ಮತ್ತು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಗ್ರಾಹಕರ ದೂರುಗಳ ಬಗ್ಗೆ ತನಿಖೆ ನಡೆಸಲಿವೆ ಎನ್ನಲಾಗಿದೆ
ಕಳೆದ ತಿಂಗಳು, ಗ್ರಾಹಕರ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ CCPA ಓಲಾ ವಿರುದ್ಧ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.ಇದಕ್ಕೆ ಕಂಪನಿಯು ಪ್ರತಿಕ್ರಿಯಿಸಿದ್ದು, ಇದು ಸುಳ್ಳು ದೂರುಗಳು ಎಂದು ಹೇಳಿದೆ. ಒಟ್ಟು 10,644 ದೂರುಗಳಲ್ಲಿ 99.1% ಅನ್ನು ಗ್ರಾಹಕರ ಸಂಪೂರ್ಣ ತೃಪ್ತಿಗಾಗಿ ದೃಢವಾದ ಪರಿಹಾರ ಕಾರ್ಯವಿಧಾನದ ಪ್ರಕಾರ ಪರಿಹರಿಸಲಾಗಿದೆ ಎಂದು ತಿಳಿಸಿತು.
ಇದರ ನಂತರ, CCPA ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ದೂರುಗಳನ್ನು ದಾಖಲಿಸಿದ ದೂರುದಾರರನ್ನು ಸಂಪರ್ಕಿಸಿದೆ. ಗ್ರಾಹಕರ ಹಕ್ಕುಗಳ ಉಲ್ಲಂಘನೆ, ದಾರಿತಪ್ಪಿಸುವ ಜಾಹೀರಾತುಗಳು ಮತ್ತು ಅನ್ಯಾಯದ ವ್ಯಾಪಾರದ ಅಭ್ಯಾಸಗಳ ಆರೋಪದ ಮೇಲೆ CCPA ಅಕ್ಟೋಬರ್ 7 ರಂದು ಶೋಕಾಸ್ ನೋಟಿಸ್ ನೀಡಿದೆ. ಗಮನಾರ್ಹವಾಗಿ, ಕಂಪನಿ ಕಳೆದ ಕೆಲವು ತಿಂಗಳುಗಳಿಂದ ಹೆಚ್ಚುತ್ತಿರುವ ಗ್ರಾಹಕರ ದೂರುಗಳನ್ನು ಎದುರಿಸುತ್ತಿದೆ. ಇತ್ತೀಚೆಗೆ, ಅಗರ್ವಾಲ್ ಕಂಪನಿಯ ಮಾರಾಟದ ನಂತರದ ಸೇವೆಯ ಬಗ್ಗೆ ಹಾಸ್ಯನಟ ಕುನಾಲ್ ಕಮ್ರಾ ಅವರೊಂದಿಗೆ ಸಾಮಾಜಿಕ ಮಾಧ್ಯಮದ ಜಗಳದಲ್ಲಿ ಭಾಗಿಯಾಗಿದ್ದರು.
ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಓಲಾ ಸ್ಕೂಟರ್ ಶೋರೂಂ ಒಂದರ ಮುಂದೆ ನಿಲ್ಲಿಸಿದ ಕಂಪನಿಯ ಇ-ಸ್ಕೂಟರ್ ಸ್ಥಳದಲ್ಲೇ ಹೊತ್ತಿ ಧಗಧಗನೆ ಉರಿದಿದೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.
ವೈರಲ್ ವಿಡಿಯೋದಲ್ಲಿ, ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಂಗಳೂರಿನ ಶೋರೂಂ ಹೊರಗೆ ಬೆಂಕಿ ಹೊತ್ತಿಕೊಂಡು ಹೊಗೆ ಸೂಸುತ್ತಿರುವುದು ಕಂಡುಬಂದಿದೆ. ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿರುವ ಓಲಾ ಎಲೆಕ್ಟ್ರಿಕ್ ಶೋರೂಂನ ಹೊರಗೆ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ಈ ಕಂಪನಿಯು ಅದರ ಕಳಪೆ ಗ್ರಾಹಕ ಸೇವೆಗಾಗಿ ಈಗಾಗಲೇ ಟೀಕೆಗೆ ಒಳಗಾಗಿದ್ದು, ಇದೀಗ ಇನ್ನಷ್ಟು ಗೇಲಿಗೆ ಒಳಗಾಗಿದೆ.
ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಜೈನ್ ಅವರು ಸ್ಕೂಟರ್ ಬೆಂಕಿಯಲ್ಲಿ ಸುಟ್ಟುಹೋದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. “ಓಲಾ ಸ್ಕೂಟರ್ ಮಾಲೀಕರ ಜೀವನದಲ್ಲಿ ಮತ್ತೊಂದು ಉರಿಯುತ್ತಿರುವ ದಿನ” ಎಂದು ಬರೆದಿದ್ದಾರೆ. ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿಯಂತೆ ಹರಡಿದೆ. “ಇದು ಓಲಾ ಬಳಕೆದಾರರಿಗೆ ಕಂಪನಿ ಸಿಇಒ ಭವಿಶ್ ಅಗರ್ವಾಲ್ ಅವರ ದೀಪಾವಳಿ ಉಡುಗೊರೆ” ಎಂದು ಜನ ತಮಾಷೆ ಮಾಡಿದ್ದಾರೆ. “ಈ ವರ್ಷ ದೀಪಾವಳಿಯ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಇತ್ತೀಚಿನ ಪಟಾಕಿ” ಎಂದು ಕೆಲವರು ಕುಟುಕಿದ್ದಾರೆ.
ಈ ಸುದ್ದಿಯನ್ನೂ ಓದಿ:ಓಲಾ…ಹೀಂಗಾಗ್ರೆ ಹ್ಯಾಂಗಲಾ …?